ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದಲ್ಲಿ ಸೌಹಾರ್ದ ಕದಡುವ ಹೊರಗಿನ ವಿಕ್ಷಿಪ್ತ ಶಕ್ತಿಗಳಿಗೆ ಆಸ್ಪದ ಕೊಡದೆ ಸ್ಥಳೀಯ ಮುಸ್ಲಿಮರಿಗೆ ‘ಕೈ’ ಟಿಕೆಟ್ ನೀಡುವಂತೆ ಮುಸ್ಲಿಂ ಧರ್ಮಗುರುಗಳ ನಿಯೋಗವೇ ರಾಜ್ಯ ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರಿದೆ.
ಧಾರ್ಮಿಕ ಗುರುಗಳ ಈ ಒತ್ತಾಯವು ಹಗಲು ಒಂದು ಪಕ್ಷದಲ್ಲಿ ಕಾಣಿಸಿಕೊಂಡು ಇರುಳು ಇನ್ನೊಂದು ಪಕ್ಷದಲ್ಲಿ ಪ್ರತ್ಯಕ್ಷವಾಗಿರುವ ಅವಕಾಶವಾದಿ ‘ಪಾರ್ಟ್‌ಟೈಂ’ ರಾಜಕಾರಣಿಯೋರ್ವನ ಓಟಕ್ಕೆ ಆರಂಭದಲ್ಲೇ ಬ್ರೇಕ್ ಬಿದ್ದಂತಾಗಿದೆ. ಅಲ್ಲದೆ, ಇಂತಹ ರಾಜಕೀಯ ನಡೆಯು ಕೈ ಅಸ್ತಿತ್ವಕ್ಕೆ ಧಕ್ಕೆ ತರಲಿದೆ ಎಂಬ ಕೂಗು ಮುಸ್ಲಿಮರಲ್ಲೇ ಕೇಳಿಬರುತ್ತಿದೆ.
ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕುತ್ತಾ ಬಂದಿದ್ದು, ಈ ಬಾರಿ ಸ್ಥಳೀಯರನ್ನು ಹೊರತುಪಡಿಸಿ ಯಾವುದೇ ರಾಜಕೀಯ ಸಿದ್ಧಾಂತವಿಲ್ಲದ ಹೊರಗಿನವರೊಬ್ಬರಿಗೆ ಟಿಕೆಟ್ ಕೊಡಿಸಲು ಯತ್ನ ನಡೆಸುತ್ತಿದ್ದಾರೆಂಬ ಊಹೋಪೋಹವು ಧಾರ್ಮಿಕ ಮುಖಂಡರು ಹಾಗೂ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರಲ್ಲಿ ಆತಂಕ ಸೃಷ್ಟಿಸಿದೆ.
ಈ ಆತಂಕಕಾರಿ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ನಗರದ ಮಸೀದಿಗಳ ಮುತುವಲ್ಲಿಗಳು, ಜಮಾತ್ ಮುಖ್ಯಸ್ಥರ ನೇತೃತ್ವದ 30 ಜನರ ನಿಯೋಗವು ರಾಜ್ಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸ ಒದಗಿಸಿದೆ.
ಸ್ಥಳೀಯರಿಗೆ ಟಿಕೆಟ್‌ಗೆ ಒತ್ತಡ!: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರನ್ನು ಇತ್ತೀಚೆಗೆ ಭೇಟಿ ಮಾಡಿರುವ ನಿಯೋಗವು ಸಮುದಾಯದಲ್ಲಿ ಒಡಕು ಮೂಡಿಸುವ, ಸೌಹಾರ್ದ ಕದಡುವ ಹೊರಗಿನ ಶಕ್ತಿಗಳ ಕೈಗೆ ಯಾವುದೇ ಕಾರಣಕ್ಕೂ ಪಕ್ಷವನ್ನು ಕೊಡಬಾರದೆಂಬ ಒತ್ತಾಯಪೂರ್ವಕ ಮನವಿ ಮಾಡಿರುವುದು ವರಿಷ್ಠರಿಗೆ ಬಿಸಿತುಪ್ಪವಾಗಿದೆ. ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಹಣ ಒಂದೇ ಮಾನದಂಡವಾಗಿಟ್ಟುಕೊಂಡು ರಾತ್ರೋರಾತ್ರಿ ಪಕ್ಷದಿಂದ ಪಕ್ಷಕ್ಕೆ ಹಾರುವಂತಹ ಯಾವುದೇ ರಾಜಕೀಯ ಸಿದ್ಧಾಂತವಿಲ್ಲದ, ಹೊರಗಿನ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟಿದ್ದೇ ಆದಲ್ಲಿ ರಾಜಕೀಯವಾಗಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ನಿಯೋಗದಲ್ಲಿದ್ದ ಮಾಜಿ ಕಾರ್ಪೋರೇಟರ್‌ಗಳು, ನಗರಸಭಾ ಮಾಜಿ ಸದಸ್ಯರು, ವಕ್ಫ್ ಬೋರ್ಡ್ ಮಾಜಿ, ಹಾಲಿ ಉಪಾಧ್ಯಕ್ಷರು ಎಚ್ಚರಿಸಿದ್ದಾರೆ. ಮುಸ್ಲಿಮರಿಗೆ ಕೊಟ್ಟಿದ್ದೇ ಆದಲ್ಲಿ ಈಗ ಅರ್ಜಿ ಸಲ್ಲಿಸಿರುವ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ಟಿಕೆಟ್ ಒಲ್ಲೇ ಎಂದಿದ್ದೇ ಆದಲ್ಲಿ, ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಇಕ್ಬಾಲ್ ಅಹ್ಮದ್, ಕಾಂಗ್ರೆಸ್ ಅಲ್ಪಸಂಖ್ಯಾತದ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹ್ಮದ್ ಸೇರಿ ಸ್ಥಳೀಯ ಆಕಾಂಕ್ಷಿತರನ್ನು ಪರಿಗಣಿಸುವಂತೆ ನಿಯೋಗವು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದೆ.
ಸಾಮಾಜಿಕ ನ್ಯಾಯ ಪಾಲನೆ: ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಮರ್ಥ, ಉತ್ತಮ ಅಭ್ಯರ್ಥಿ ಆಯ್ಕೆ ಸೇರಿ ಎಲ್ಲ ರೀತಿಯಲ್ಲೂ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ರಾಜ್ಯ ವರಿಷ್ಠರು, ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲನೆಗೆ ವಿಶೇಷ ಆದ್ಯತೆ ಕೊಡಲಿದ್ದು, ನಗರ ಕ್ಷೇತ್ರವನ್ನು ಮುಸ್ಲಿಮರಿಗೆ ಬಿಟ್ಟುಕೊಡುವುದು ಖಚಿತ ಎನ್ನಲಾಗಿದೆ. ಹಾಗಾಗಿ, ವರಿಷ್ಠರು ಸ್ಥಳೀಯರು, ಸಜ್ಜನ ಅಭ್ಯರ್ಥಿ ಆಯ್ಕೆ ಹೊಣೆಗಾರಿಕೆಯನ್ನು ಜಿಲ್ಲೆಯ ಹೈಕಮಾಂಡ್ ಎನಿಸಿರುವ ಪರಮೇಶ್ವರ ಹೆಗಲಿಗೆ ಹೊರಿಸಿದ್ದಾರೆ. ನಗರ ಕ್ಷೇತ್ರಕ್ಕೆ ಹೊರಗಿನ ಅಭ್ಯರ್ಥಿಗೆ ಮಣೆಹಾಕಿದ್ದೇ ಆದಲ್ಲಿ 11 ಕ್ಷೇತ್ರಗಳ ಮೇಲೂ ರಾಜಕೀಯ ಪರಿಣಾಮ ಬೀರಲಿದೆ ಎಂಬುದನ್ನು ಪರಮೇಶ್ವರಗೆ ಧರ್ಮಗುರುಗಳ ನಿಯೋಗ ರವಾನಿಸಿದ್ದು ಪರಂಗೆ ನುಂಗಲಾರದ ಬಿಸಿ ತುಪ್ಪವಾಗಿದೆ.