ನ್ಯೂಸ್

ಮಹಾರಾಷ್ಟ್ರದ ಮೈತ್ರಿಕೂಟದಲ್ಲಿ ಅಪಸ್ವರ; ಮಹತ್ವದ ಸಭೆಗೆ ಆಹ್ವಾನಿಸುವಂತೆ ಕಾಂಗ್ರೆಸ್ ಬೇಡಿಕೆ

ಮುಂಬೈ: ಮಹಾರಾಷ್ಟ್ರದ ತ್ರಿಪಕ್ಷ ಆಳುವ ಕೂಟ ಮಹಾರಾಷ್ಟ್ರ ವಿಕಾಸ್ ಆಘಾಡಿಯಲ್ಲಿ (ಎಂವಿಎ) ಬಿರುಕಿನ ಲಕ್ಷಣಗಳು ಕಾಣಿಸತೊಡಗಿವೆ. ಸರ್ಕಾರದ ನಿರ್ಧಾರ ಪ್ರಕ್ರಿಯೆಯಲ್ಲಿ ತನಗೆ ಹೆಚ್ಚಿನ ಅಧಿಕಾರ ಇರಬೇಕು ಹಾಗೂ ಪ್ರಮುಖ ಸಭೆಗಳಲ್ಲಿ ತನಗೂ ಅವಕಾಶ ಕಲ್ಪಿಸಬೇಕು ಎಂದು ಮಿತ್ರ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಒತ್ತಾಯಿಸುತ್ತಿರುವುದೇ ಒಡಕಿಗೆ ಕಾರಣ ಎನ್ನಲಾಗಿದೆ. ಶಿವಸೇನೆ, ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ಸೇರಿಕೊಂಡು ಕಳೆದ ವರ್ಷ ನವೆಂಬರ್​ನಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಈ ಎರಡು ವಿಷಯಗಳು ಹಾಗೂ ಇತರ ಕೆಲವು ವಿಚಾರಗಳನ್ನು ರ್ಚಚಿಸಲು ಕಾಂಗ್ರೆಸ್ ಮುಖಂಡರು ಮುಂದಿನ ವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರನ್ನು ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೋವಿಡ್-19 ಮಹಾಮಾರಿಗೆ ಪರಿಹಾರ ಮತ್ತು ನಿಸರ್ಗ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ ನೀಡಿಕೆ ಸೇರಿದಂತೆ ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್​ರೊಂದಿಗೆ ಠಾಕ್ರೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಆದ್ದರಿಂದ ಕಾಂಗ್ರೆಸನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ಪಕ್ಷದಲ್ಲಿ ಮೂಡಿದೆ ಎನ್ನಲಾಗಿದೆ.

ಕೆಲವು ವಿಚಾರಗಳಲ್ಲಿ ಪಕ್ಷದೊಳಗೆ ಅತೃಪ್ತಿಯಿದ್ದು ಸಿಎಂ ಜೊತೆ ರ್ಚಚಿಸಿ ಪರಿಹರಿಸಿಕೊಳ್ಳುವುದು ನಮ್ಮ ಬಯಕೆಯಾಗಿದೆ ಎಂದು ಕಾಂಗ್ರೆಸ್ ಮಂತ್ರಿಯೊಬ್ಬರು ತಿಳಿಸಿದ್ದಾರೆ. ಅಧಿಕಾರ ಮತ್ತು ಹೊಣೆಗಾರಿಕೆಯಲ್ಲಿ ಮೂರೂ ಪಕ್ಷಗಳಿಗೆ ಸಮಾನ ಪಾಲಿರಬೇಕೆಂದು ಕಳೆದ ನವೆಂಬರ್​ನಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ನಿರ್ಧರಿಸಲಾಗಿತ್ತು ಎಂದು ಇನ್ನೊಬ್ಬ ಕಾಂಗ್ರೆಸ್ ನಾಯಕ ನೆನಪಿಸಿದ್ದಾರೆ.

ಏನೇನು ಚರ್ಚೆ?: ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಾಳಾ ಸಾಹೇಬ್ ಥೋರಟ್, ಲೋಕೋಪಯೋಗಿ ಸಚಿವ ಅಶೋಕ್ ಚೌಹಾಣ್ ಸೋಮವಾರ ಸಿಎಂ ಅನ್ನು ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ತಿಗೆ ನೇಮಕ, ಮಂಡಳಿ ಮತ್ತು ನಿಗಮಗಳಿಗೆ ನೇಮಕ, ಕಾಂಗ್ರೆಸ್ ಸಚಿವರು ಎದುರಿಸುತ್ತಿರುವ ಸಮಸ್ಯೆಗಳು ಮೊದಲಾದ ವಿಷಯಗಳನ್ನು ಚರ್ಚಿಸುವ ನಿರೀಕ್ಷೆಯಿದೆ.