ಹೊಸನಗರ ಪಪಂನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಗೋಪಾಲಕೃಷ್ಣ ಬೇಳೂರು, ಕಲಗೋಡು ರತ್ನಾಕರ್, ಚಂದ್ರಮೌಳಿ, ಸುಮಾ ಸುಬ್ರಹ್ಮಣ್ಯ, ಸಣ್ಣಕ್ಕಿ ಮಂಜು ಇತರರಿದ್ದರು.  
ನ್ಯೂಸ್

ಹೊಸನಗರ ಪಪಂನಲ್ಲಿ ಕಾಂಗ್ರೆಸ್ ಆಡಳಿತ

ಹೊಸನಗರ: ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾದವು. ಅಧ್ಯಕ್ಷರಾಗಿ ನಾಗಪ್ಪ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಚಂದ್ರಕಲಾ ನಾಗರಾಜ್ ಚುನಾವಣೆಯಲ್ಲಿ ಜಯಗಳಿಸಿದರು.

11 ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್ 4, ಬಿಜೆಪಿ 4, ಜೆಡಿಎಸ್ 3 ಸದಸ್ಯರನ್ನು ಹೊಂದಿವೆ. ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ನಾಗಪ್ಪ ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಬದಲಾದ ರಾಜಕೀಯದಲ್ಲಿ ನಾಗಪ್ಪ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಅಧ್ಯಕ್ಷರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಚಂದ್ರಕಲಾ ನಾಗರಾಜ ಕಾಂಗ್ರೆಸ್‌ನಿಂದ, ಬಿಜೆಪಿಯಿಂದ ಕೃಷ್ಣವೇಣಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 6-3 ಅಂತರದಲ್ಲಿ ಚಂದ್ರಕಲಾ ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಬಿಜೆಪಿ ಸೇರಿದ್ದ ಹಾಲಗದ್ದೆ ಉಮೇಶ್, ಗುಲಾಬಿ ಮರಿಯಪ್ಪ, ಗುರುರಾಜ್ ಗೈರಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಯಿತು.
ಕೈ ಪಾಳಯ ಸಂಭ್ರಮಾಚರಣೆ: ಬಹುತೇಕ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯಲಿದೆ ಎಂಬ ಲೆಕ್ಕಾಚಾರ ತಲೆಕೆಳಗಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದಲ್ಲಿ ಸಂಭ್ರಮ ಮನೆಮಾಡಿತು. ಆದರೆ ಅಧಿಕಾರದ ನಿರೀಕ್ಷೆಯಲ್ಲಿದ್ದ ಬಿಜೆಪಿಯಲ್ಲಿ ಮೌನ ಆವರಿಸಿತು. ಪಟ್ಟಣದ ಕಾಂಗ್ರೆಸ್ ಕಚೇರಿ ಎದುರು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ನೂತನ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಶ್ಮಿ ಹಾಲೇಶ್ ಕಾರ್ಯನಿರ್ವಹಿಸಿದರು. ಕಾಂಗ್ರೆಸ್ ಸದಸ್ಯರಾದ ಅಶ್ವಿನಿಕುಮಾರ್, ಶಾಹಿನಾ ನಾಸೀರ್, ಸಿಂಥಿಯಾ ಶೆರಾವೊ, ಬಿಜೆಪಿಯ ಸುರೇಂದ್ರ ಕೋಟ್ಯಾನ್, ಗಾಯತ್ರಿ ನಾಗರಾಜ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖರಾದ ಕಲಗೋಡು ರತ್ನಾಕರ್, ಚಂದ್ರಮೌಳಿ ಕೋಡೂರು, ಸುಮಾ ಸುಬ್ರಹ್ಮಣ್ಯ, ಸಣ್ಣಕ್ಕಿ ಮಂಜು, ಸುಬ್ರಹ್ಮಣ್ಯ ಮಾಸ್ತಿಕಟ್ಟೆ ಇದ್ದರು.