ನ್ಯೂಸ್

ದ್ವೇಷದ ಜಾತ್ರೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ರಾಹುಲ್ ಗಾಂಧಿ ಮತ್ತೆ ಯಾತ್ರೆ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಇಡೀ ದೇಶವನ್ನೇ ಸ್ವಾತಂತ್ರೃ ಚಳವಳಿಗೆ ಧುಮಕುವಂತೆ ಮಾಡಿದ ಶಕ್ತಿಯೇ ಮಹಾತ್ಮಗಾಂಧಿ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ್ ಹಾಲಪ್ಪ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನ ಮಹಾತ್ಮಗಾಂಧಿ ಸ್ಮಾರಕ ಭವನದ ಆವರಣದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳವಳಿ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರೃಕ್ಕಾಗಿ ನಡೆದ ಮಾಡು ಇಲ್ಲವೆ ಮಡಿ ಹೋರಾಟ ಕ್ವಿಟ್ ಇಂಡಿಯಾ ಚಳವಳಿ ಭಾರತದ ಸ್ವಾತಂತ್ರೃ ಇತಿಹಾಸದಲ್ಲಿಯೇ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.

ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಪು ಮಾಡಿಕೊಳ್ಳುವ ನೈತಿಕ ಹಕ್ಕು ಇದ್ದರೆ ಆದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ.ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದುಕೊಟ್ಟ ಅಂದಿನ ಜನಸಂಘದ ನಾಯಕರಿಗಲ್ಲ. ಇದೇ ಕ್ವಿಟ್ ಇಂಡಿಯಾ ಸವಿನೆನಪಿಗಾಗಿ ರಾಹುಲ್‌ಗಾಂಧಿ ಅವರು ದ್ವೇಷದ ಜಾತ್ರೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಮೇಘಾಲಯದಿಂದ ಗುಜರಾತ್‌ನ ಪೋರ್ ಬಂದರ್‌ವರೆಗೆ ಎರಡನೇ ಭಾರತ್ ಜೋಡೋ ಪಾದಯಾತ್ರೆ ಕೈಗೊಳ್ಳಲಿದ್ದು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಲು ಹೊರಟಿದ್ದಾರೆ ಎಂದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ, 1932ರಲ್ಲಿ ಮಹಾತ್ಮಗಾಂಧೀಜಿಯವರು ತುಮಕೂರಿಗೆ ಬಂದಿದ್ದರಿಂದ ಸ್ಫೂರ್ತಿ ಪಡೆದ ಸ್ವಾತಂತ್ರೃ ಚಳವಳಿಗೆ ಧುಮುಕಿದ್ದು ವಿದ್ಯಾರ್ಥಿ ಹೋರಾಟದಲ್ಲಿ 3 ತಿಂಗಳ ಕಾಲ ಜೈಲು ವಾಸ ಅನುಭವಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಹೋರಾಟದಲ್ಲಿ ತೊಡಗಿದ್ದೇನೆ. ಭಾರತಕ್ಕೆ ಸ್ವಾತಂತ್ರೃ ತಂದುಕೊಡುವಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಷ್ಟರ ಪಾತ್ರ ಮಹತ್ವದಾಗಿದೆ ಎಂದರು.

ಮೇಯರ್ ಎಂ.ಪ್ರಭಾವತಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್, ಟೂಡಾ ಮಾಜಿ ಅಧ್ಯಕ್ಷರಾದ ರೆಡ್ಡಿ ಚಿನ್ನಯಲ್ಲಪ್ಪ, ಸಿದ್ದಲಿಂಗೇಗೌಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆಬ್ಬೂರು ಶ್ರೀನಿವಾಸಮೂರ್ತಿ, ಷ್ಮಣುಖಪ್ಪ, ವಾಲೇ ಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ದೇಶದಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ತರುವ ಸಲುವಾಗಿ ತಮ್ಮ ಪ್ರಾಣ ತೆತ್ತಿದ್ದಾರೆ. ಆದರೆ, ಮಣಿಪುರ ಹೊತ್ತಿ ಉರಿಯುತಿದ್ದರೂ ಪ್ರಧಾನಿ ಅತ್ತ ತಿರುಗಿಯೂ ನೋಡುತ್ತಿಲ್ಲ. ಇಂತಹ ಪ್ರಧಾನಿ ದೇಶಕ್ಕೆ ಬೇಕೇ ? ಜಿ.ಚಂದ್ರಶೇಖರಗೌಡ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿ