ಬೆಂಗಳೂರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅನುಮತಿ ಪಡೆಯದೆ ರಾಜ್ಯ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿರುವುದರ ಕುರಿತು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗಿದೆ. ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮುಖಂಡರ ನಿಯೋಗವು ಸೋಮವಾರ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ 28ರಂದು ನಮ್ಮ ಪಕ್ಷದ ಕಚೇರಿಯಲ್ಲಿ ಸಭೆ ನಡೆದು ಹೊರಬರುತ್ತಿರುವಾಗ ಕಾಂಗ್ರೆಸ್ಸಿನ ಸುಮಾರು 13 ಕಾರ್ಯಕರ್ತರು ಬಂದು ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಮ್ಮಲ್ಲೂ 200-300 ಕಾರ್ಯಕರ್ತರು ಅಲ್ಲೇ ನಿಂತಿದ್ದರು. ನಾವು ಮನಸ್ಸು ಮಾಡಿದ್ದರೆ ಅಲ್ಲೇ ಅವರನ್ನು ತಡೆಯಬಹುದಿತ್ತು ಎಂದು ವಿವರಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಹಕ್ಕನ್ನು ನಾವು ಗೌರವಿಸುತ್ತೇವೆ. ಆದರೆ, ಅನುಮತಿ ಇಲ್ಲದೆ, ಪೊಲೀಸರಿಗೆ ಗೊತ್ತೇ ಇಲ್ಲದಂತೆ ಪ್ರತಿಭಟಿಸಿದರೆ ಅದು ಗೂಂಡಾವರ್ತಿ ಆಗುತ್ತದೆ ಎಂದರು. ಬಂಧಿಸಿ ಕರೆದೊಯ್ದ 15 ನಿಮಿಷಕ್ಕೆ ಮತ್ತೊಮ್ಮೆ ಏಳೆಂಟು ಜನರು ಪ್ರತಿಭಟನೆ ಮಾಡಿದ್ದಾರೆ. 13ರಂದು 26ರಂದು ಸೇರಿ ಒಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಈ ರೀತಿ ಪ್ರತಿಭಟಿಸಿದ್ದಾರೆ ಎಂದು ಟೀಕಿಸಿದರು. ಆದರೆ, ಅವರ ಮೇಲೆ ಎಫ್‍ಐಆರ್, ಕೇಸ್ ಮಾಡಿಲ್ಲ ಎಂದು ಆಕ್ಷೇಪಿಸಿದರು.
ನಾವು ಪೋಸ್ಟರ್ ಅಂಟಿಸಿದ್ದಕ್ಕೆ ಕೇಸ್ ಹಾಕಿದ್ದಾರೆ. ಈಗ ಕೋರ್ಟಿಗೆ ಅಲೆದಾಡುತ್ತಿದ್ದೇವೆ. ಕಾನೂನು ಎಲ್ಲರಿಗೂ ಒಂದೇ ಇರಬೇಕು. ಕಾಂಗ್ರೆಸ್ಸಿನವರು ಅಧಿಕಾರದಲ್ಲಿ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಕೇಸ್ ಮಾಡದಿರುವುದು, ನಾವು ಅಧಿಕಾರದಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮನ್ನು ಹದ್ದುಬಸ್ತಿನಲ್ಲಿ ಇಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯವನ್ನು ಕಮೀಷನರ್ ಗಮನಕ್ಕೆ ತಂದಿದ್ದು, ಇದನ್ನು ತೀಕ್ಷ್ಣವಾಗಿ ಪರಿಗಣಿಸುವುದಾಗಿ ಹೇಳಿದ್ದಾರೆ ಎಂದರು. ಇದೇರೀತಿ ನಡೆದರೆ ನಾವು ಕೂಡ ಒಂದು ಹೆಜ್ಜೆ ಮುಂದಿಡಬೇಕಾದೀತು ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಸಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಮಾತನಾಡಿ, 28ರಂದು ಕೇವಲ 20 ನಿಮಿಷದ ಅಂತರದಲ್ಲಿ ಬಿಜೆಪಿ ಕಚೇರಿ ಮುಂದೆ 2 ಸಾರಿ ಪ್ರತಿಭಟನೆ ಮಾಡಿದ್ದಾರೆ. 10ರಿಂದ 12 ಜನರು ಇದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರವನ್ನು ನಾವು ಪ್ರಶ್ನಿಸಿದ್ದು, ಇದರ ವಿರುದ್ಧ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರ ಭೇಟಿ ವೇಳೆ ಪ್ರತಿಭಟನೆ ಮಾಡಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ಸಿನ ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರೆ, ಪೊಲೀಸರು ರಕ್ಷಣೆ ಕೊಡುತ್ತಾರೆ. ಇದನ್ನು ಪ್ರಶ್ನಿಸಿ ಮನವಿ ನೀಡಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷ ಕೇವಲ 3 ರಾಜ್ಯದಲ್ಲಿ ಅಧಿಕಾರದಲ್ಲಿದೆ. ನಾವು ದೇಶದ 20 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೇವೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮೊಳೆ ಹೊಡೆದಂತೆ ಶಾಶ್ವತವಾಗಿ ಇರುತ್ತದೆ ಎಂಬ ಭ್ರಮೆಯಲ್ಲಿದ್ದರೆ ಅದು ತಪ್ಪು ಎಂದು ಆಕ್ಷೇಪಿಸಿದರು.
ಎಷ್ಟೇ ಕೇಸ್ ಹಾಕಿದರೂ ನಾವು ಅವನ್ನು ಎದುರಿಸಿಯೇ ಬಂದವರು ಎಂಬುದನ್ನು ಕಾಂಗ್ರೆಸ್ ನಾಯಕರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಎನ್.ರವಿಕುಮಾರ್ ಎಚ್ಚರಿಕೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಶಾಸಕ ಸಿಮೆಂಟ್ ಮಂಜು, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾದ ವೈ. ಸಂಪಂಗಿ, ವೈ. ರಾಮಕ್ಕ ಮತ್ತು ಎಸ್. ಬಾಲರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಹಾಗೂ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬಿಜೆಪಿ ಮುಖಂಡ ಗೌತಮ್ ಜೈನ್, ರಾಜ್ಯ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಇದ್ದರು.