ನ್ಯೂಸ್

ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಿದ ಸೋನಿಯಾ, ಪ್ರಿಯಾಂಕ, ರಾಹುಲ್ ಗಾಂಧಿ

ಬೆಂಗಳೂರು: ಎಐಸಿಸಿ ಅಧ್ಯಕ್ಷರನ್ನ ಆಯ್ಕೆ ಮಾಡಲು ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೆಹಲಿಯ ಐಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಇತ್ತ ಭಾರತ್​ ಜೋಡೋ ಯಾತ್ರೆ ಹಿನ್ನೆಲೆ ಕರ್ನಾಟಕದಲ್ಲಿರುವ ರಾಹುಲ್​ ಗಾಂಧಿ ಅವರು ಬಳ್ಳಾರಿಯಲ್ಲಿ ಮತದಾನ ಮಾಡಿದರು.

ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆಗೆ ಇಂದು(ಸೋಮವಾರ) ದೇಶಾದ್ಯಂತ ಮತದಾನ ಆರಂಭವಾಗಿದೆ. ಭಾರತ್​ ಜೋಡೋ ಯಾತ್ರೆ ಬಳ್ಳಾರಿಯಲ್ಲಿದ್ದು, ಯಾತ್ರಿಗಳ ಅನುಕೂಲಕ್ಕಾಗಿ ಬಳ್ಳಾರಿ ಗಡಿಯ ಸಂಗನಕಲ್ಲು ಬಳಿ ವಿಶೇಷ ಮತಗಟ್ಟೆ ಸ್ಥಾಪಿಸಿದ್ದು, 40 ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ಕೊಡಲಾಗಿದೆ. ಇಲ್ಲಿಯೇ ರಾಹುಲ್​ ಗಾಂಧಿ ಮತ ಚಲಾಯಿಸಿದರು. ಶಾಸಕ ನಾಗೇಂದ್ರ, ಡಿ.ಕೆ. ಸುರೇಶ್ ಕೂಡ ಬಳ್ಳಾರಿಯಲ್ಲೇ ಹಕ್ಕು ಚಲಾಯಿಸಿದರು.

ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಬೆಂಗಳೂರಲ್ಲೇ ಮತದಾನ ಮಾಡಿದರು.

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್​ನ ಅಧ್ಯಕ್ಷ ಸ್ಥಾನಕ್ಕೇರಲು ಕರ್ನಾಟಕದ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ನಾಯಕ ಚುಕ್ಕಾಣಿ ಹಿಡಿಯಲಿದ್ದು, ಖರ್ಗೆ ಮತ್ತು ತರೂರ್​ ಇಬ್ಬರಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದಕ್ಕೆ ಬುಧವಾರ(ಅ.19) ಉತ್ತರ ಸಿಗಲಿದೆ.