ನ್ಯೂಸ್

ಐಟಿ ಎಂದರೆ ಕಾಂಗ್ರೆಸ್ ಗೆ ಆದಾಯ ತೆರಿಗೆ ಮಾತ್ರ ಗೊತ್ತು: ಕೇಂದ್ರ ಸಚಿವ ವ್ಯಂಗ್ಯ

ಬೆಂಗಳೂರು: ಐ ಟಿ ಎಂದರೆ ಆದಾಯ ತೆರಿಗೆ ಹಾಗೂ ಇಲಾಖೆ ಬಗ್ಗೆ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಗೊತ್ತು. ಅದನ್ನೇ ಹೇಳುತ್ತದೆ. ಆದರೆ ಈ ವಿಚಾರದಲ್ಲಿ ಬಿಜೆಪಿ ಯೋಚನೆ ಭಿನ್ನವಾಗಿದೆ. ಜತೆಗೆ ಆದಾಯ ತೆರಿಗೆ ಇಲಾಖೆ ಕಾನೂನಿಗೆ ಯಾರೂ ಅತೀತರಲ್ಲವೆಂಬ ಅರಿವಿದೆ ಎಂದು ಸಚಿವ ಅನುರಾಗ ಸಿಂಗ್ ಠಾಕೂರ್ ವಿಮರ್ಶಿಸಿ, ಕಾಂಗ್ರೆಸ್ ಯೋಚನಾ ಸರಣಿ ಬಗ್ಗೆ ವ್ಯಂಗ್ಯವಾಡಿದರು.

ಖಾಸಗಿ ಹೋಟೆಲ್‌ನಲ್ಲಿ ಸ್ಟಾವೇರ್ ತಂತ್ರಜ್ಞರೊಂದಿಗೆ ಗುರುವಾರ ಸಂವಾದ ನಡೆಸಿದ ಅವರು, ಐ.ಟಿ. ಎಂದರೆ ಇಂಡಿಯಾ ಟುಮಾರೋ (ಭವಿಷ್ಯದ ಭಾರತ), ಇಂಡಿಯನ್ ಟಾಲೆಂಟ್ (ಭಾರತದ ಪ್ರತಿಭೆ), ಇಂಡಿಯನ್ ಟೂರಿಸಂ (ಭಾರತದ ಪ್ರವಾಸೋದ್ಯಮ) ಹೀಗೆ ರಚನಾತ್ಮಕ, ಅಭಿವೃದ್ಧಿ ದೃಷ್ಟಿಕೋನದಲ್ಲಿ ಬಿಜೆಪಿ ಚಿಂತನೆ ನಡೆಸಿದರೆ, ಇನ್‌ಕಂ ಟ್ಯಾಕ್ಸ್ (ಆದಾಯ ತೆರಿಗೆ) ಸುತ್ತ ಕಾಂಗ್ರೆಸ್ ಗಿರಕಿ ಹೊಡೆಯುತ್ತದೆ ಎಂದು ತಿವಿದರು.

ಆದಾಯ ತೆರಿಗೆ ಇಲಾಖೆ ಕುರಿತು ಸದಾ ಆ ಪಕ್ಷ ಮಾತನಾಡುತ್ತದೆ. ರಿಟರ್ನ್ಸ್ ಸಲ್ಲಿಸದಿದ್ದರೆ ಇಲಾಖೆ ನೋಟಿಸ್ ನೀಡುತ್ತದೆ. ರಿಟರ್ನ್ಸ್ ೈಲ್ ಮಾಡದ ಕಾಂಗ್ರೆಸ್ ಪಕ್ಷಕ್ಕೂ ಅದೇ ರೀತಿ ನೋಟಿಸ್ ನೀಡಿದ್ದು, ಕಾಂಗ್ರೆಸ್ ಪಕ್ಷದ ತನ್ನನ್ನು ತಾನು ಕಾನೂನಿನಿಂದ ಅತೀತವೆಂದು ಭಾವಿಸಿದಂತಿದೆ ಎಂದು ಠಾಕೂರ್ ಕಿಚಾಯಿಸಿದರು.

ಗರಿಷ್ಠ ಪ್ರಮಾಣದ ಬಳಕೆ

ಐಟಿ ಸಾಧ್ಯತೆ, ಸಾಮರ್ಥ್ಯ, ಪ್ರತಿಭಾ ಸಂಪತ್ತನ್ನು ಮೋದಿ ಸರ್ಕಾರ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿದೆ. ಮೂಲಸೌಕರ್ಯ, ತಂತಜ್ಞಾನ, ಸಾರ್ವಜನಿಕ ಡಿಜಿಟಲ್ ಮೂಲಸವಲತ್ತು, ಕೌಶಲ್ಯ ವೃದ್ಧಿ, ಕೃತಕಬುದ್ಧಿ ಮತ್ತೆ ಬಳಕೆ ಮಾತ್ರವಲ್ಲದೆ ಆದಾಯ ತೆರಿಗೆ ಸಂಗ್ರಹದಲ್ಲೂ ಭಾರತ ಗೆದ್ದಿದೆ ಎಂದರು.

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಒಂದು ದಶಕದ ಆಡಳಿತ ತುಲನೆ ಮಾಡಿದರೆ ಬದಲಾವಣೆ ಅರಿವಾಗುತ್ತದೆ. ಯುಪಿಎ ಆಡಳಿತಾವಧಿಯು ಬರೀ ಹಗರಣಗಳು, ಅಕ್ರಮಗಳು, ಭ್ರಷ್ಟಾಚಾರದಿಂದ ತುಂಬಿ ಹೋಗಿತ್ತು ಎಂದು ದೂರಿದರು.

ಹಿಂದಿನ ದಶಕದ ಈ ದುರಾಡಳಿತ ಮತ್ತು ದುರವಸ್ಥೆಯ ಬಗ್ಗೆ 18-22ರ ವಯಸ್ಸಿನ ಯುವ ಜನತೆಗೆ ತಿಳಿದಿಲ್ಲ. ಅದನ್ನು ಗೊತ್ತುಪಡಿಸಿದರೆ ಮೋದಿಯ ಪ್ರಾಮಾಣಿಕ, ದಕ್ಷ, ನಿಷ್ಕಳಂಕ ಆಡಳಿತ ಮತ್ತು ಅಭಿವೃದ್ಧಿ ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅನುರಾಗ್ ಸಿಂಗ್ ಠಾಕೂರ್ ಹೇಳಿದರು.

ಈ ಸಂವಾದದ ಸಂದರ್ಭದಲ್ಲಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರೀ, ರಾಜ್ಯ ಸಂಚಾಲಕರಾದ ವೃತ್ತಿಪರ ಪ್ರಕೋಷ್ಠದ ಕಿರಣ್‌ಕುಮಾರ್ ಅಣ್ಣಿಗೇರಿ, ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ವಿಜಯಕುಮಾರ್ ಇದ್ದರು.