ನ್ಯೂಸ್

ನಂಜನಗೂಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ನಗರವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಸಮಗ್ರ ಅಭಿವೃದ್ಧಿಪಡಿಸಲು ಲೋಕಸಭೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್‌ಗೆ ಬೆಂಬಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮನವಿ ಮಾಡಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ನಾನು ಲೋಕೋಪಯೋಗಿ ಸಚಿವನಾಗಿದ್ದಾಗ 9.5 ಕೋಟಿ ರೂ. ವೆಚ್ಚದಲ್ಲಿ ಶ್ರೀಕಂಠೇಶ್ವರ ದೇವಾಲಯದ 1.5 ಕಿ.ಮೀ ವ್ಯಾಪ್ತಿಯ ರಥಬೀದಿಯನ್ನು ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಪಡಿಸಲಾಯಿತು. ಹಾಗಾಗಿ ರಥೋತ್ಸವ ಸಾಂಗವಾಗಿ ನಡೆಯುತ್ತದೆ ಎಂದವರು ಹೇಳಿದರು.
ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಿಂದ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಜನರ ಮಧ್ಯೆ ಧರ್ಮ-ಜಾತಿಗಳ ವಿಷಬೀಜ ಬಿತ್ತಿ ಕೋಮು ಸೌಹಾರ್ದತೆಗೆ ಧಕ್ಕೆ ತಂದಿದೆ. ಸುಳ್ಳು ಭರವಸೆಗಳನ್ನು ನೀಡಿ ಕಾಲ ಹರಣ ಮಾಡಿದೆ. ಆದರೆ ನುಡಿದಂತೆ ನಡೆದ ನಮ್ಮ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಹದೇವಪ್ಪ ಹೇಳಿದರು.
ಮಾದರಿ ಕಾರ್ಯ: ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ನನ್ನ ತಂದೆ ಧ್ರುವನಾರಾಯಣ ಅವರನ್ನು 2 ಬಾರಿ ಸಂಸದರನ್ನಾಗಿ ಕ್ಷೇತ್ರದ ಜನರು ಚುನಾಯಿಸಿದ್ದರು. ಅವರು ಮಾಡಿದ್ದ ಅಭಿವೃದ್ಧಿ ಕಾರ್ಯ ನಮಗೆ ಮಾದರಿಯಾಗಿದೆ. ಈ ಬಾರಿ ಸುನೀಲ್ ಬೋಸ್‌ಗೆ ಬೆಂಬಲಿಸಬೇಕು ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿ.ಎಂ. ಶಂಕರ್, ಕೆ.ಮಾರುತಿ, ಕೆ.ಬಿ.ಸ್ವಾಮಿ, ಶಶಿರೇಖಾ, ಮಹಾದೇವಪ್ಪ, ಇಂಧನ್ ಬಾಬು, ಕೆಂಪಣ್ಣ, ರವಿ ಪ್ರಕಾಶ್, ಎನ್. ಟಿ.ಗಿರೀಶ್, ಕಳಲೆ ಕೇಶವಮೂರ್ತಿ, ನಗರಸಭಾ ಸದಸ್ಯರಾದ ಎಸ್.ಗಂಗಾಧರ್, ಎಸ್.ಪಿ.ಮಹೇಶ್, ಶ್ರೀಕಂಠ ಸ್ವಾಮಿ, ಸಿದ್ದಿಕ್, ಕೆ.ಎಂ. ಬಸವರಾಜು, ಗಾಯತ್ರಿ ಮೋಹನ್ ಇತರರು ಇದ್ದರು.