ನ್ಯೂಸ್

ವಂಶಪಾರಂಪರ್ಯ ರಾಜಕೀಯ ಭಾರತೀಯ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್| Shashi Tharoor

ನವದೆಹಲಿ: ಭಾರತದ ರಾಜಕಾರಣದಲ್ಲಿ ವಂಶಪಾರಂಪರ್ಯ ರಾಜಕೀಯ ದೇಶದ ಪ್ರಜಾಪ್ರಭುತ್ವಕ್ಕೆ ಗಂಭೀರವಾದ ಬೆದರಿಕೆಯನ್ನು ಒಡ್ಡಿದ್ದು, ಅದನ್ನು ಅರ್ಹತೆಯ ಆಧಾರದ ಮೇಲೆ ವಿನಿಮಯ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಪ್ರಾಜೆಕ್ಟ್​  ಸಿಂಡಿಕೇಟ್​ಗೆ ಲೇಖನ ಬರೆದಿರುವ ಶಶಿ ತರೂರ್, ಅದರಲ್ಲಿ ರಾಜಕೀಯ ಅಧಿಕಾರವು ಸಾಮರ್ಥ್ಯ, ಬದ್ದತೆ ಹಾಗೂ ತಳಮಟ್ಟದಿಂದ ಕೂಡಿರದೇ ವಂಶಪಾರಂಪರ್ಯ ವ್ಯಕ್ತಿಗಳಿಂದ ನಿರ್ಧರಿಸಲ್ಪಟ್ಟರೆ ಆಡಳಿತದ ಗುಣಮಟ್ಟ ಹಾಳಾಗುತ್ತದೆ. ನೆಹರು-ಗಾಂಧಿ ಕುಟುಂಬದ ಪ್ರಭಾವವು ರಾಜಕೀಯ ಉದ್ಯೋಗವು ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದ್ದಾರೆ.
ಭಾರತತದ ರಾಜಕಾರಣದಲ್ಲಿ ದಶಕಗಳಿಂದ, ಒಂದು ಕುಟುಂಬವು ಭಾರತೀಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಹಾಗೂ ಪ್ರಸ್ತುತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನೆಹರು-ಗಾಂಧಿ ರಾಜಕೀಯ ಪ್ರಭಾವವು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದೊಂದಿಗೆ ಸಂಬಂಧ ಹೊಂದಿದೆ. ಆದರೆ ರಾಜಕೀಯ ನಾಯಕತ್ವವು ಜನ್ಮಸಿದ್ಧ ಹಕ್ಕು ಎಂಬುದನ್ನು ಅದು ಗಟ್ಟಿಗೊಳಿಸಿದೆ. ಈ ಕಲ್ಪನೆಯು ದೇಶದ ಪ್ರತಿಯೊಂದು ಪಕ್ಷದಲ್ಲಿ, ಪ್ರತಿಯೊಂದು ಪ್ರದೇಶದಲ್ಲಿ ಮತ್ತು ಪ್ರತಿಯೊಂದು ಹಂತದಲ್ಲೂ ವ್ಯಾಪಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ವಂಶಪಾರಂಪರ್ಯ ರಾಜಕಾರಣ ಕೇವಲ ಕಾಂಗ್ರೆಸ್​ಗೆ ಸೀಮಿತವಾಗಿಲ್ಲ.  ಮಹಾರಾಷ್ಟ್ರದಲ್ಲಿ ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ತಮ್ಮ ಮಗ ಉದ್ಧವ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದರು, ಈಗ ಅವರ ಮೊಮ್ಮಗ ಆದಿತ್ಯ ಸಾಲಿನಲ್ಲಿದ್ದಾರೆ. ಯುಪಿಯಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಂತರ ಮಗ ಅಖಿಲೇಶ್ ಯಾದವ್, ಈಗ ಸಂಸದ ಮತ್ತು ಪಕ್ಷದ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ, ಬಿಹಾರದ ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಬಳಿಕ ಅವರ ಮಗ ಚಿರಾಗ್ ಪಾಸ್ವಾನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಜಮ್ಮು-ಕಾಶ್ಮೀರವನ್ನು ಅಬ್ದುಲ್ಲಾ ಅವರ ಮೂರು ತಲೆಮಾರು ರಾಜಕಾರಣ ನಡೆಸುತ್ತಿದೆ. ಮುಫ್ತಿ ಕುಟುಂಬವು ವಿರೋಧ ಪಕ್ಷಗಳಲ್ಲಿ ಪ್ರಾಬಲ್ಯ ಹೊಂದಿದೆ. ಪಂಜಾಬ್‌ನಲ್ಲಿ, ಶಿರೋಮಣಿ ಅಕಾಲಿ ದಳವು ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಮಗ ಸುಖ್‌ಬೀರ್‌ಗೆ ಹಸ್ತಾಂತರಿಸಲ್ಪಟ್ಟಿದೆ. ತೆಲಂಗಾಣದಲ್ಲಿ ಬಿಆರ್​ಎಸ್ ಸಂಸ್ಥಾಪಕ ಕೆ. ಚಂದ್ರಶೇಖರ ರಾವ್ ಅವರ ಮಕ್ಕಳ ನಡುವೆ ಉತ್ತರಾಧಿಕಾರ ಹೋರಾಟ ನಡೆಯುತ್ತಿದೆ. ತಮಿಳುನಾಡಿನಲ್ಲಿ ದಿವಂಗತ ಎಂ. ಕರುಣಾನಿಧಿ ಅವರ ಕುಟುಂಬವು ಡಿಎಂಕೆಯನ್ನು ನಿಯಂತ್ರಿಸುತ್ತಿದೆ,  ಮಗ ಎಂ.ಕೆ. ಸ್ಟಾಲಿನ್ ಸಿಎಂ ಆಗಿದ್ದು, ಈಗ  ಅವರ ಮೊಮ್ಮಗನನ್ನು ಉತ್ತರಾಧಿಕಾರಿಯಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.
ಕೆಲವು ಅಪವಾದಗಳನ್ನು ಹೊರತುಪಡಿಸಿದ್ರೆ ಭಾರತದ ರಾಜಕೀಯ ಪಕ್ಷಗಳು ಹೆಚ್ಚಾಗಿ ವ್ಯಕ್ತಿ ಆಧಾರಿತವಾಗಿವೆ. ನಾಯಕತ್ವದ ಆಯ್ಕೆ ಪ್ರಕ್ರಿಯೆಗಳು ಸಾಮಾನ್ಯವಾಗಿ ಅಪಾರದರ್ಶಕವಾಗಿರುತ್ತವೆ. ನಿರ್ಧಾರಗಳನ್ನು ಸಣ್ಣ ಗುಂಪು ಅಥವಾ ಒಬ್ಬ ನಾಯಕ ತೆಗೆದುಕೊಳ್ಳುತ್ತಾರೆ. ಪರಿಣಮಾ ಸ್ವಜನಪಕ್ಷಪಾತ ಸಾಮಾನ್ಯವಾಗಿ ಅರ್ಹತೆಯನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)