ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತರು ಶೌರ್ಯ ಸಂಚಲನದ ಅಂಗವಾಗಿ ಪಥಸಂಚಲನ ನಡೆಸಿದರು.  
ನ್ಯೂಸ್

ಕಾಂಗ್ರೆಸ್‌ನಿಂದ ಸಂವಿಧಾನಕ್ಕೆ ವಿರುದ್ಧದ ನಡೆ

ಭದ್ರಾವತಿ: ಶೌರ್ಯಕ್ಕೆ ಮತ್ತೊಂದು ಹೆಸರೇ ಬಜರಂಗದಳ. ಹಿಂದುಗಳ ರಕ್ಷಣೆ, ಹಿಂದುಪರ ಹೋರಾಟಕ್ಕಾಗಿ ಜನಿಸಿದ ಸಂಘಟನೆ ಎಂದು ಬಜರಂಗದಳದ ಪ್ರಾಂತ ಸಂಯೋಜಕ ಪ್ರಭಂಜನ್ ಹೇಳಿದರು.

ನಗರದ ಬಜರಂಗದಳ ಸಂಘಟನೆಯು ಶೌರ್ಯ ಸಂಚಲನದ ಅಂಗವಾಗಿ ಏರ್ಪಡಿಸಿದ್ದ ಶೋಭಾಯಾತ್ರೆಯ ನಂತರ ತರೀಕೆರೆ ರಸ್ತೆ ರೈಲ್ವೆ ಮೇಲ್ಸೇತುವೆ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಹಸು ಮತ್ತು ಕರು ಜತೆಗಿರುವ ಚಿಹ್ನೆಯನ್ನು ಹೊಂದಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿಯೇ ಆ ಹಸು-ಕರುಗಳ ಪ್ರಾಣಕ್ಕೆ ಕಂಟಕ ಎದುರಾಗಿದೆ. ಇದರ ಪಾಪದ ಫಲವನ್ನು ಆ ಪಕ್ಷ ಇನ್ನುಮುಂದೆ ಎದುರಿಸಲಿದೆ. ಕೇವಲ ಅಧಿಕಾರಕ್ಕಾಗಿ ಮುಸ್ಲಿಂ ತುಷ್ಟೀಕರಣವನ್ನು ಮಿತಿ ಮೀರಿ ಮಾಡುತ್ತಿದೆ. ಜನಸಂಖ್ಯೆಯಲ್ಲಿ ಹೆಚ್ಚುತ್ತಿದ್ದರೂ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಿ ಎಲ್ಲ ಸೌಲಭ್ಯ ನೀಡುತ್ತ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಗಂಡಾಂತರ ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಸಿದರು.

ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗಿ ಸ್ವಾತಂತ್ರ್ಯ ಬಂದರೂ ಗೋಹತ್ಯೆ, ಸ್ತ್ರೀಯರ ಮೇಲೆ ಹಲ್ಲೆ ಇನ್ನಿತರೆ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇಂದಿಗೂ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅಂದಿನ ಎಲ್ಲ ಸಮಸ್ಯೆಗಳೂ ಇಂದಿಗೂ ಜೀವಂತವಾಗಿವೆ. ಇದರಲ್ಲಿ ಯಾವುದೂ ಬದಲಾಗಿಲ್ಲ. ಇದೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಹೋರಾಟ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬಿ.ಎಚ್.ರಸ್ತೆ ಹುತ್ತಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ಇದೇ ಪ್ರಥಮ ಬಾರಿಗೆ ಸಮವಸ್ತ್ರಧಾರಿ ಕಾರ್ಯಕರ್ತರ ಸಂಗೀತಯುಕ್ತ ಪಥಸಂಚಲನ ಅಂಡರ್ ಬ್ರಿಡ್ಜ್, ಹಾಲಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ರಂಗಪ್ಪ ಸರ್ಕಲ್ ಮೂಲಕ ತರೀಕೆರೆ ರಸ್ತೆಯ ಗಾಂಧಿ ಸರ್ಕಲ್‌ವರೆಗೆ ಸಾಗಿತು.

ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ.ರಾಮಪ್ಪ, ಧರ್ಮಪ್ರಸಾರ ಪ್ರಮುಖ ನಾರಾಯಣ ವರ್ಣೇಕರ್, ವಿಭಾಗ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಆನಂದ ಇತರರಿದ್ದರು.