ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕ್ರಿಪ್ಟೋ ಕರೆನ್ಸಿ ಹಗರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತಪ್ಪಿತಸ್ಥ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಸ್ವಾಗತ ಅರ್ಹ ಕ್ರಮ ಎಂದು ವಿಧಾನ ಪರಿಷತ್ ಸದಸ್ಯ ಯುಬಿ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸತತವಾಗಿ ವಿಧಾನ ಪರಿಷತ್‌ನಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ನಾನು ಧ್ವನಿಯೆತ್ತಿದ್ದೆ. ಹಿಂದಿನ ಗೃಹ ಸಚಿವರು ಯಾವುದೇ ಹಗರಣ ನಡೆದಿಲ್ಲ ಎಂದು ಪದೇ ಪದೆ ಸುಳ್ಳು ಹೇಳಿಕೆ ಕೊಡುತ್ತಾ ಬಂದಿದ್ದರು. ಸದನದಲ್ಲಿ ನಾನು ಪದೇ ಪದೆ ಧ್ವನಿ ಎತ್ತಿದ ಪರಿಣಾಮ ಸಿಐಡಿ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ ಈ ಹಗರಣವನ್ನು ಹಿಂದಿನ ಸರ್ಕಾರ ಮುಚ್ಚಿ ಹಾಕುತ್ತಲೇ ಬಂದಿದ್ದು ಈಗ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಲವು ಪ್ರಭಾವಿ ರಾಜಕಾರಣಿಗಳು ಕೈಜೋಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ನ್ಯಾಯಪರಿಪಾಲನೆ ದೃಷ್ಟಿಯಿಂದ ಬಿಟ್ ಕಾಯಿನ್ ಹಗರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ನಾನು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಿದ್ದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಿಟ್ ಕಾಯಿನ್ ಹಗರಣದ ತನಿಖೆ ಮಾಡಲು ವಿಶೇಷ ತನಿಖಾ ದಳ ರಚನೆ ಮಾಡಿರುವುದು ಹಾಗೂ ಅದರ ನಂತರ ಎಸ್‌ಐಟಿ ತನಿಖೆ ಚುರುಕುಗೊಳಿಸಿರುವುದು ನನ್ನ ಹೋರಾಟಕ್ಕೆ ಸಂದ ಜಯವಾಗಿದೆ ಎಂದಿದ್ದಾರೆ.
ಈ ಹೋರಾಟ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಸಂಪೂರ್ಣ ಸತ್ಯ ರಾಜ್ಯದ ಜನರಿಗೆ ತಿಳಿಯುವಂತಾಗಬೇಕು ಹಾಗೂ ತಪ್ಪಿತಸ್ಥರಿಗೆ ಕಾನೂನಿನಂತೆ ಸೂಕ್ತ ಶಿಕ್ಷೆ ಆಗಬೇಕು ಎಂಬುದು ನನ್ನ ಒತ್ತಾಸೆಯಾಗಿದೆ ಎಂದು ಯುಬಿ ವೆಂಕಟೇಶ್ ಹೇಳಿದ್ದಾರೆ.