ನ್ಯೂಸ್

ಬಿಜೆಪಿ ಸೇರಲು ಸಿದ್ಧವಾಗಿ ನಿಂತಿದ್ದಾರೆ ಕಾಂಗ್ರೆಸ್​ನ 20 ಶಾಸಕರು!

ಬೆಂಗಳೂರು: ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹಿರಿಯ ಶಾಸಕ ಉಮೇಶ್​ ಕತ್ತಿ ನಡೆಸಿದ ಅತೃಪ್ತರ ಸಭೆ ಬೆನ್ನಲ್ಲೇ ಆಪರೇಷನ್​ ಕಮಲ ಮುನ್ನಲೆಗೆ ಬಂದಿದೆ. ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಚಿವ ರಮೇಶ್ ಜಾರಕಿಹೊಳಿ ಶುಕ್ರವಾರ ಪ್ರತ್ಯೇಕವಾಗಿ ಕೊಟ್ಟ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿವೆ.

ಉಮೇಶ್ ಕತ್ತಿ ಭಿನ್ನಮತ ನಡೆಸುತ್ತಿಲ್ಲ. ಅದೊಂದು ಚರ್ಚೆ ಆಗಿದೆ. ಮುಳುಗುವ ಮನೆಯಾಗಿರುವ ಕಾಂಗ್ರೆಸ್ ಜತೆ ಯಾರೂ ಕೈ ಜೋಡಿಸುವುದಿಲ್ಲ. ಬಿಜೆಪಿ ಹೈಕಮಾಂಡ್ ಅಸ್ತು ಅಂದ್ರೆ ಕೆಲವೇ ಕ್ಷಣದಲ್ಲಿ ಕಾಂಗ್ರೆಸ್​ನ ಐವರು ಶಾಸಕರಿಂದ ರಾಜೀನಾಮೆ ಕೊಡಿಸುವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನನ್ನ ಸಂಪರ್ಕದಲ್ಲಿ ಒಟ್ಟು 22 ಶಾಸಕರಿದ್ದಾರೆ. ತಕ್ಷಣಕ್ಕೆ ಪಕ್ಷದಿಂದ ಒಪ್ಪಿಗೆ ದೊರೆತರೆ 5 ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಬಾಂಬ್​ ಸಿಡಿಸಿದ್ರು. ರಾಜ್ಯದಲ್ಲಿ ಬಿಜೆಪಿ 3 ವರ್ಷ ಮಾತ್ರವಲ್ಲ. ಮುಂದಿನ 5 ವರ್ಷವೂ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಮೇಶ್​ ಜಾರಕಿಹೊಳಿ ಹೇಳಿಕೆ ನೀಡಿದ ಕೆಲ ಸಮಯದ ಬಳಿಕ ಹಾವೇರಿಯಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಬೇರೆ ಪಕ್ಷದ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕೋ- ಬೇಡವೋ ಎಂಬ ಚಿಂತನೆ ಪಕ್ಷದಲ್ಲಿದೆ ನಡೆಯುತ್ತಿದೆ. ಇತರ ಪಕ್ಷದ 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮತ್ತೊಂದು ಬಾಂಬ್ ಸಿಡಿಸಿದರು. ಬಿಜೆಪಿ ವರ್ಚಸ್ಸು ಇರೋದಕ್ಕೆ ಬೇರೆ ಪಕ್ಷದ ಶಾಸಕರು ಬರುತ್ತಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.