ನ್ಯೂಸ್

ಸ್ಫೋಟಿಸಿದ್ದು ಪಟಾಕಿ ಅಲ್ಲ, ನನ್ನ ಏಳಿಗೆಯನ್ನು ಸಹಿಸದವರೇ ಇದನ್ನು ಮಾಡಿದ್ದಾರೆ, ಅವರಿಗೆ ದೇವರು ಒಳ್ಳೆಯದು ಮಾಡಲಿ: ಶಾಸಕ ಹ್ಯಾರಿಸ್​

ಬೆಂಗಳೂರು: ಕಾಂಗ್ರೆಸ್​ ಶಾಸಕ ಹ್ಯಾರಿಸ್​ ಅವರು ನಿನ್ನೆ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟಗೊಂಡು ಅವರು ಗಾಯಗೊಂಡಿದ್ದರು. ಅದೊಂದು ಪಟಾಕಿ ಎಂದು ಹೇಳಲಾಗಿತ್ತು.

ಆದರೆ ಅದು ಪಟಾಕಿ ತರಹ ಇರಲಿಲ್ಲ ಎಂದು ಶಾಸಕ ಹ್ಯಾರಿಸ್ ಹೇಳಿದ್ದಾರೆ. ಇಂದು ಸೇಂಟ್​ ಫಿಲೋಮಿನಾ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಬಳಿಕ ಮಾತನಾಡಿ, ದೇವರು ದೊಡ್ಡವನು. ಈ ಘಟನೆಯಿಂದ ನಾನು ಪಾರಾದೆ. ಈ ಸ್ಫೋಟ ಪಟಾಕಿಯಿಂದ ಆಗಿದ್ದಲ್ಲ. ಹಾಗೆ ಸ್ಫೋಟವಾದಾಗ ನಿಜಕ್ಕೂ ನನಗೆ ಭಯವಾಗಿತ್ತು ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ. ನಾನು ಗೃಹಸಚಿವರನ್ನು ಭೇಟಿ ಮಾಡುತ್ತೇನೆ. ನನ್ನ ಏಳಿಗೆ ಸಹಿಸದವರು ಈ ಕೃತ್ಯ ಎಸಗಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಹ್ಯಾರಿಸ್ ಹೇಳಿದ್ದಾರೆ.

ನಾನೀಗ ಪೂರ್ತಿ ಆರೋಗ್ಯವಾಗಿದ್ದೇನೆ. ಕಾರ್ಯಕರ್ತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ಗೃಹಸಚಿವರೂ ಫೋನ್​ ಮಾಡಿ ವಿಚಾರಿಸಿದ್ದಾರೆ ಎಂದು ಹೇಳಿದರು.

ಸ್ಫೋಟಗೊಂಡಿದ್ದು ಪಟಾಕಿಯಂತಿರಲಿಲ್ಲ. ನಾವೂ ದೀಪಾವಳಿಯಲ್ಲಿ ಪಟಾಕಿಗಳನ್ನು ಹೊಡೆದಿದ್ದೇವೆ. ಇದು ಬಾಲ್​ ತರಹ ಇತ್ತು. ಅಂತಹ ಪಟಾಕಿಯನ್ನು ನಾವು ನೋಡಿರಲಿಲ್ಲ ಎಂದಿದ್ದಾರೆ.