ನ್ಯೂಸ್

'ಹಿಂದು ರಾಷ್ಟ್ರ ನಿರ್ಮಾಣ'ಕ್ಕೆ ಕರೆ ನೀಡಿದ ಶಾಸಕಿ; ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದ ಕಾಂಗ್ರೆಸ್!

ಛತ್ತೀಸ್‌ಗಢ: ಧರ್ಶಿವಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅನಿತಾ ಶರ್ಮಾ 'ಹಿಂದು ರಾಷ್ಟ್ರ ನಿರ್ಮಿಸಲು ಒಗ್ಗಟ್ಟಾಗಿ' ಎಂದು ಕರೆ ನೀಡಿದ್ದ ವಿಡಿಯೋ ತುಣುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದೀಗ ಶಾಸಕಿ ಅನಿತಾ ವರ್ವಾ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸಿ, 'ಇದು ಅವರ ವೈಯಕ್ತಿಕ ಅಭಿಪ್ರಾಯ' ಎಂದು ಹೇಳಿದೆ.

ರಾಯ್‌ಪುರದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಶಾಸಕಿ ಹಿಂದು ರಾಷ್ಟ್ರ ನಿರ್ಮಾಣ ಆಗಬೇಕು. ಇದಕ್ಕಾಗಿ ಎಲ್ಲಾ ಹಿಂದುಗಳು ಮುಂದೆ ಬರಬೇಕು ಎಂದು ಮನವಿ ಮಾಡಿಕೊಂಡಿದ್ದರು.

ಶಾಸಕಿ ಅನಿತಾ ವರ್ಮಾ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ ಎನ್ನಲಾಗಿದೆ. ಹಿಂದು ರಾಷ್ಟ್ರ ನಿರ್ಮಾಣಕ್ಕೆ ದೇಶದ ಜನರು ಒಂದಾಗಬೇಕು ಎಂದಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಶಾಸಕಿಯ ಹೇಳಿಕೆಯನ್ನು ಪ್ರತಿಪಕ್ಷಗಳು ತಪ್ಪಾಗಿ ಬಿಂಬಿಸಿದ್ದಾರೆ ಎಂದು ಛತ್ತೀಸ್‌ಗಢ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಸಂವಿಧಾನದ ಜತೆ ನಿಂತಿದೆ. ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ್ ಜವಾಹರ್ ಲಾಲ್ ನೆಹರು ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರಂತಹ ನಾಯಕರು ರಚಿಸಿದ ಸಂವಿಧಾನದಲ್ಲಿ ಉಲ್ಲೇಖಿಸಲಾದ ಜಾತ್ಯತೀತತೆ ಬಗ್ಗೆ ಕಾಂಗ್ರೆಸ್ ದೃಢವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಿದ್ಧಾಂತವನ್ನು ಹೊಂದಬಹುದು. ಪಕ್ಷವು ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುತ್ತದೆ ಎಂದು ಶುಕ್ಲಾ ಹೇಳಿದ್ದರು.

ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಶಾಸಕಿ ಅನಿತಾ ವರ್ಮಾ ಪ್ರತಿಕ್ರಿಯಿಸಿದ್ದು, 'ದೇಶದಲ್ಲಿ ವಿವಿಧ ಧರ್ಮಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ನಾವು ಯಾರನ್ನೂ ಒಡೆಯಲು ಬಯಸುವುದಿಲ್ಲ ಬಯಸುವುದಿಲ್ಲ. ನಮ್ಮ ನಾಯಕ ರಾಹುಲ್ ಗಾಂಧಿ ಜನರನ್ನು ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ನಡೆಸುತ್ತಾರೆ. ಬಿಜೆಪಿಗೆ ಸೇರಿದ ಕೆಲ ಜನರು ಸಮಾಜದಲ್ಲಿ ಒಡಕು ಮೂಡಿಸಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)