ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಕಾಂಗ್ರೆಸ್ನ ಡಿ. ತ್ರಿವೇಣಿ ಆಯ್ಕೆ ಆಗಿದ್ದು, ರಾಜ್ಯದ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ತ್ರಿವೇಣಿ ಪಾತ್ರರಾಗಿದ್ದಾರೆ.
ಉಪ ಮೇಯರ್ ಆಗಿ ಕಾಂಗ್ರೆಸ್ನ ಬಿ.ಜಾನಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಯರ್ ಆಯ್ಕೆಗಾಗಿ ಒಟ್ಟು 44 ಮತದಾರರಿಂದ ಮತದಾನ ನಡೆದಿದ್ದು, ಡಿ. ತ್ರಿವೇಣಿ ಪರ 28 ಮತ ಚಲಾವಣೆಯಾದರೆ, ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿದ್ದ ನಾಗರತ್ನಗೆ ಕೇವಲ 16 ಮತ ಚಲಾವಣೆಯಾಗಿವೆ.
ತ್ರಿವೇಣಿ ಅವರಿಗೆ ಕೇವಲ 23 ವರ್ಷ. ರಾಜ್ಯದಲ್ಲೇ ಅತಿ ಚಿಕ್ಕ ವಯಸ್ಸಿನ ಮೇಯರ್ ಆಗಿ ತ್ರಿವೇಣಿ ದಾಖಲೆ ಬರೆದಿದ್ದಾರೆ. ತ್ರಿವೇಣಿ ಅವರು ಪ್ಯಾರಾ ಮೆಡಿಕಲ್ ವಿದ್ಯಾಭ್ಯಾಸ ಮಾಡಿದ್ದಾರೆ. 2022ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ 4ನೇ ವಾರ್ಡ್ನಿಂದ ಸ್ಪರ್ಧಿಸಿ 501 ಮತಗಳಿಂದ ಗೆದ್ದಿದ್ದಾರೆ. ತ್ರಿವೇಣಿ ಅವರ ತಾಯಿ ಸುಶೀಲಾ ಬಾಯಿ ಈ ಹಿಂದೆ ಮೇಯರ್ ಆಗಿದ್ದರು.
ಕಳೆದ ವರ್ಷ ಕಾಂಗ್ರೆಸ್ನಿಂದ ರಾಜೇಶ್ವರಿ ಸುಬ್ಬರಾಯುಡು ಎಂಬುವರು ಮೇಯರ್ ಆಗಿ ಆಯ್ಕೆಯಾಗಿದ್ದರು. ಅವಧಿ ಮುಗಿದ ಹಿನ್ನೆಲೆ ಈಗ ಹೊಸ ಮೇಯರ್ ಆಯ್ಕೆಯಾಗಿದೆ. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಉಪ ಮೇಯರ್ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿತ್ತು. ತ್ರಿವೇಣಿ ಮೇಯರ್ ಆಗಿ, ಜಾನಕಿ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಶಾಸಕ ಸೋಮಶೇಖರ ರೆಡ್ಡಿ ಹಾಗೂ ಕಾಂಗ್ರೆಸ್ನಿಂದ ಶಾಸಕ ನಾಗೇಂದ್ರ ಅವರು ಪಾಲಿಕೆಯಲ್ಲೇ ಮೊಕ್ಕಾಂ ಹೂಡಿದ್ದರು. (ದಿಗ್ವಿಜಯ ನ್ಯೂಸ್)