ನ್ಯೂಸ್

ಕ್ಲೋಸ್ ಫೈಟ್ ಕ್ಷೇತ್ರಗಳೇ ಟಾರ್ಗೆಟ್; 2018ರಲ್ಲಿ ಕಡಿಮೆ ಅಂತರದಲ್ಲಿ ಸೋತ ಕಡೆ ಕಾಂಗ್ರೆಸ್, ಬಿಜೆಪಿ ನಾಯಕರ ಗಮನ

Bengaluru - General - Rama Kishan K V

ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಆರೇಳು ತಿಂಗಳಷ್ಟೇ ಬಾಕಿ ಇದ್ದು, ರಾಜಕೀಯ ಪಕ್ಷಗಳು ತಂತ್ರಗಾರಿಕೆ ಹೊಸೆಯುವ ಕಾರ್ಯದಲ್ಲಿ ನಿರತವಾಗಿವೆ. ಮತದಾರ ಸಮುದಾಯದಲ್ಲಿ ತಮ್ಮ ಪರ ಅಲೆ ಉಂಟುಮಾಡಲು ಒಂದರ ಮೇಲೊಂದು ದಾಳ ಉರುಳಿಸುತ್ತಿವೆ.

ಜಾತಿ ಲೆಕ್ಕಾಚಾರ, ಭರವಸೆ ಬಿತ್ತುವುದು, ನಾಯಕರನ್ನು ಸೆಳೆಯುವುದು, ಮತಗಳು ಛಿದ್ರವಾಗದಂತೆ ನೋಡಿಕೊಳ್ಳುವುದು ಸೇರಿ ಹತ್ತು ಹಲವು ಪ್ರಯತ್ನ ನಡೆಯುತ್ತಿವೆ. ಇದರ ಜತೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಕಳೆದುಕೊಂಡ ಕ್ಷೇತ್ರಗಳನ್ನು ಪುನಃ ಗಳಿಸಲು ಹೆಚ್ಚು ಗಮನ ಹರಿಸುತ್ತಿವೆ. 2023ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿನ ಚಿತ್ರಣ ಬೇರೆ ಇರುತ್ತದೆ. ಅಲ್ಲಿ ಪರಿಣಾಮ ಬೀರುವ ಅಂಶಗಳು ಬೇರೆಯವೇ ಆಗಿರುತ್ತವೆ ಎಂಬ ಸ್ಪಷ್ಟ ಅರಿವಿದ್ದರೂ, ರಾಜಕೀಯ ಪಕ್ಷಗಳು ತಮ್ಮ ಮತಗಳು ಭದ್ರವಾಗಿರುವ ಕಡೆ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳನ್ನು ಗೆಲ್ಲಲು ಗಮನ ನೀಡುತ್ತಿವೆ.

ಕಳೆದ ಚುನಾವಣೆಯಲ್ಲಿ ಗೆಲ್ಲಬಹುದಾಗಿದ್ದ ಕ್ಷೇತ್ರಗಳು ಯಾವ ಕಾರಣಕ್ಕೆ ಕೈಬಿಟ್ಟು ಹೋದವು? ಯಾವ ಬೂತ್​ನಲ್ಲಿ ನಿರೀಕ್ಷೆಯಷ್ಟು ಮತ ಬರಲಿಲ್ಲ? ಕೊನೆ ಘಳಿಗೆಯಲ್ಲಿ ಕೈಕೊಟ್ಟವರು ಯಾರು? ಎಂಬ ಕಾರಣವನ್ನು ಹುಡುಕಿ ಅದನ್ನು ಸರಿಮಾಡಿಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ತೇಪೆ ಹಚ್ಚುವ ಮೂಲಕ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ. ಬಿಜೆಪಿ ಕೂಡ ಎ, ಬಿ, ಸಿ, ಡಿ ಎಂದು ಕ್ಷೇತ್ರಗಳನ್ನು ವರ್ಗೀಕರಣ ಮಾಡಿ ಆ ಪ್ರಕಾರ ಕೆಲಸ ಮಾಡುತ್ತಿದೆ. ಸುಲಭವಾಗಿ ಗೆಲ್ಲುವ ಕ್ಷೇತ್ರ, ಕೊಂಚ ಪ್ರಯತ್ನ ಹಾಕಬೇಕಾಗಿರುವ ಕ್ಷೇತ್ರಗಳು, ಹೆಚ್ಚಿನ ಶ್ರಮದ ಅಗತ್ಯ ಇರುವ ಕ್ಷೇತ್ರ, ತೀರಾ ಕ್ಲಿಷ್ಟಕರವಾಗಿರುವ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದೆ. ಎ ಕೆಟಗರಿಯಲ್ಲಿರುವ ಕಡೆ ತನ್ನ ಪರವಾದ ವಾತಾವರಣ ಹದಗೆಡದಂತೆ ನೋಡಿಕೊಳ್ಳುವುದು, ಬಿ ಕೆಟಗರಿಯಲ್ಲಿರುವ ಕ್ಷೇತ್ರಗಳನ್ನು ಎ ಕೆಟಗರಿಗೆ ತರಲು ಏನು ಮಾಡಬೇಕೆಂದು ಯೋಜನೆ ರೂಪಿಸುವುದು, ಸಿ ಕೆಟಗರಿಯಲ್ಲಿರುವುದನ್ನು ಬಿ ಕೆಟಗರಿಗೆ ತರಲು ಪ್ರಯತ್ನಿಸುವ ಬಗ್ಗೆ ಸಮಗ್ರ ಯೋಜನೆ ಸಿದ್ಧಪಡಿಸುತ್ತಿದೆ. ಇದರಲ್ಲಿ ಕ್ಲೋಸ್ ಫೈಟ್ ಇರುವ ಕ್ಷೇತ್ರಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ.

2018ರ ಚುನಾವಣೆ ಬಳಿಕ 24 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು, ಬಳಿಕ ರಾಜೀನಾಮೆ ಕೊಟ್ಟು ಶಾಸಕರಾಗಿ ಆಯ್ಕೆಯಾದವರೂ ಇದ್ದಾರೆ. ಸಾರ್ವತ್ರಿಕ ಚುನಾವಣೆಯನ್ನೇ ಗಮನದಲ್ಲಿಟ್ಟು ನೋಡುವುದಾದರೆ ಸುಮಾರು 35ರಿಂದ 37 ಕ್ಷೇತ್ರಗಳಲ್ಲಿ ನೇರ ಹಣಾಹಣಿ ನಡೆದಿತ್ತು. ಅಂದರೆ ಅತೀ ಕಡಿಮೆ ಅಂತರದಲ್ಲಿ ಫಲಿತಾಂಶ ನಿರ್ಧಾರವಾಗಿತ್ತು. 5 ಸಾವಿರಕ್ಕಿಂತ ಕಡಿಮೆ ಮತದಿಂದ ಸೋತವರ ಸಂಖ್ಯೆ ಇಷ್ಟು. ಸಾವಿರದಿಂದ ಎರಡು ಸಾವಿರ ಮತಗಳಲ್ಲಿ ಸೋತವರು 20ಕ್ಕಿಂತ ಹೆಚ್ಚು ಮಂದಿ ಇದ್ದಾರೆ. ಇಂತಹ ಕ್ಷೇತ್ರಗಳತ್ತ ಎರಡೂ ಪಕ್ಷಗಳು ದೃಷ್ಟಿ ನೆಟ್ಟಿವೆ. ಶೃಂಗೇರಿಯಲ್ಲಿ ಸಂಘಟನೆಯೊಳಗಿನ

ಅಸಮಾಧಾನದಿಂದ ಕ್ಷೇತ್ರ ಕಳೆದುಕೊಂಡಿದ್ದು, ಹನೂರು, ಕುಣಿಗಲ್​ನಂತಹ ಕ್ಷೇತ್ರದಲ್ಲಿ ಕೊನೆಯ ಹಂತದಲ್ಲಿ ಹೆಚ್ಚಿನ ಶ್ರಮ ಹಾಕದೇ ಇರುವುದು ಕ್ಷೇತ್ರ ಕಳೆದುಕೊಳ್ಳಲು ಕಾರಣ ಎಂಬುದನ್ನು ಬಿಜೆಪಿ ಅರಿತಿದೆ. ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರ ವಹಿಸಲು ಸಂಘಟನಾತ್ಮಕ ಕೆಲಸಗಳನ್ನು ಚುರುಕುಗೊಳಿಸಿದೆ. ಅಭ್ಯರ್ಥಿಗಿಂತ ಸಂಘಟನೆಯನ್ನೇ ಮುಂದು ಮಾಡಿ ಚುನಾವಣೆಯನ್ನು ಎದುರಿಸುವುದು ಬಿಜೆಪಿಯ ಈ ಬಾರಿಯ ಪ್ರಯತ್ನವಾಗಿರಲಿದೆ ಎಂದು ಪಕ್ಷದ ಪ್ರಮುಖರ ಅಭಿಪ್ರಾಯವಾಗಿದೆ.

ಪ್ರತಿ ಕ್ಷೇತ್ರದಲ್ಲಿ ಸೂಕ್ಷ್ಮ ಅವಲೋಕನ

ಬಿಜೆಪಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳಲ್ಲಿ ಬಹುತೇಕ ಕಡೆ ಕಾಂಗ್ರೆಸ್ ಪ್ರಮುಖ ಎದುರಾಳಿ. ಆದರೆ, ಕಾಂಗ್ರೆಸ್ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳ ಪೈಕಿ ಕೆಲವು ಕಡೆ ಜೆಡಿಎಸ್ ಎರಡನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ ಸಂಗತಿ. ಇದನ್ನು ಅರಿತುಕೊಂಡೇ ಕಾಂಗ್ರೆಸ್ ಪ್ರತಿ ಕ್ಷೇತ್ರದ ರಾಜಕೀಯ ಚಿತ್ರಣದ ಮೇಲೆ ಗಮನ ಹರಿಸುತ್ತಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಬಲಾಬಲ, ಎದುರಾಳಿಯ ಬಲಾಬಲ, ಪಕ್ಷದ ಅಭ್ಯರ್ಥಿ ಯಾರಾದರೆ ಸೂಕ್ತ ಎಂಬ ಸಂಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಟಿಕೆಟ್ ಹಂಚಿಕೆಯಲ್ಲಿ ಯಡವಟ್ಟು ಆಗದಂತೆ ಆದ್ಯತೆ ನೀಡುತ್ತಿದ್ದಾರೆಂಬುದು ಕೈ ಪದಾಧಿಕಾರಿಯೊಬ್ಬರ ವಿವರಣೆಯಾಗಿದೆ.

ಕಾಂಗ್ರೆಸ್ ಟಾರ್ಗೆಟ್ ಕ್ಷೇತ್ರಗಳು

ಸೌದತ್ತಿ, ರಾಮದುರ್ಗ, ಬೀಳಗಿ, ಹುನಗುಂದ, ದೇವರಹಿಪ್ಪರಗಿ, ನಾಗಠಾಣ, ಕಲಬುರಗಿ ದಕ್ಷಿಣ, ಆಳಂದ, ಸಿಂಧನೂರು, ಭಟ್ಕಳ, ರಾಣೆಬೆನ್ನೂರು, ದಾವಣಗೆರೆ ಉತ್ತರ, ಮಾಯಕೊಂಡ, ಹೊನ್ನಾಳಿ ಮತ್ತು ತುರುವೇಕೆರೆ.

ಬಿಜೆಪಿಯ ಟಾರ್ಗೆಟ್ ಕ್ಷೇತ್ರಗಳು

ಚಿತ್ತಾಪುರ, ಯಮಕನಮರಡಿ, ಶೃಂಗೇರಿ, ಖಾನಾಪುರ, ಜಮಖಂಡಿ, ಬದಾಮಿ, ಬಸವನಬಾಗೇವಾಡಿ, ಗದಗ, ಕುಂದಗೋಳ, ಹಳಿಯಾಳ, ಕಂಪ್ಲಿ, ಬಳ್ಳಾರಿ (ಎಸ್ಟಿ ಮೀಸಲು), ಚಿಂತಾಮಣಿ, ಬ್ಯಾಟರಾಯನಪುರ, ಕುಣಿಗಲ್, ವಿಜಯನಗರ, ಸಕಲೇಶಪುರ, ಹನೂರು.

ಸೋಲಿಗೆ ಕಾರಣಗಳು
  • ಕೊನೆ ಕ್ಷಣದಲ್ಲಿ ಮೈಮರೆತಿದ್ದು
  • ನಾಲಿಗೆ ಸಡಿಲ ಬಿಟ್ಟು, ತಪ್ಪು ಸಂದೇಶ ಕಳಿಸಿದ್ದು
  • ನಮ್ಮನ್ನು ಬಿಟ್ಟರೆ ಮತ್ಯಾರು? ಎಂಬ ಅತಿಯಾದ ಆತ್ಮವಿಶ್ವಾಸ
  • ಕೊನೆ ಘಳಿಗೆಯಲ್ಲಿ ಅಭ್ಯರ್ಥಿ ಘೋಷಣೆ
  • ನಾಯಕರು ಹೆಚ್ಚಿನ ಗಮನ ಕೊಡದೇ ಇದ್ದಿದ್ದು
  • ಜಾತಿ ಸಮೀಕರಣದಲ್ಲಿ ತಪ್ಪಾದ ಲೆಕ್ಕಾಚಾರಗಳು

ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಕಡೆ ಏಕೆ ಸೋತೆವೆಂಬ ಸ್ಪಷ್ಟ ಅರಿವಿದೆ. ಅದನ್ನು ಸರಿಪಡಿಸಿಕೊಂಡು 150 ಸ್ಥಾನ ಗೆಲ್ಲುವುದು ನಿಶ್ಚಿತ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ವಿವರವನ್ನು ಮನೆಮನೆಗೆ ತಲುಪಿಸಿ, ಪ್ರತಿ ಬೂತ್ ಗಟ್ಟಿ ಮಾಡುವ ಕೆಲಸ ಮಾಡುತ್ತಿದ್ದೇವೆ.

| ಎನ್. ರವಿಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರಗಳತ್ತ ವಿಶೇಷ ಗಮನ ನೀಡಿದ್ದು, ನಮ್ಮ ಅಭ್ಯರ್ಥಿಗಳು ಸಹ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಚ್ಚಳ. ಬಿಜೆಪಿ ಬಗ್ಗೆ ಜನ ಭ್ರಮನಿರಸನಗೊಂಡಿದ್ದಾರೆ. ಎಲ್ಲೆಲ್ಲೂ ಭ್ರಷ್ಟಾಚಾರದ್ದೇ ಚರ್ಚೆ ನಡೆಯುತ್ತಿದೆ.

| ಸಲೀಂ ಅಹ್ಮದ್ ಕೆಪಿಸಿಸಿ ಕಾರ್ಯಾಧ್ಯಕ್ಷ