ನ್ಯೂಸ್

ತುಕ್ಡೇ ತುಕ್ಡೇ ಗ್ಯಾಂಗ್​ಗೆ ಕಾಂಗ್ರೆಸ್​ನದ್ದೇ ನಾಯಕತ್ವ: ಲೋಕಸಭೆಯಲ್ಲಿ ಮೋದಿ ತೀವ್ರ ವಾಗ್ದಾಳಿ

ನವದೆಹಲಿ: ಒಡೆದು ಆಳುತ್ತಿದ್ದ ಬ್ರಿಟಿಷರು ಹೋದರೂ, ಅದೇ ನೀತಿಯನ್ನು ತನ್ನ ಗುಣವನ್ನಾಗಿ ಕಾಂಗ್ರೆಸ್ ಅಳವಡಿಸಿಕೊಂಡಿದೆ. ಈಗ ಅದು ತುಕ್ಡೇ ತುಕ್ಡೇ ಗ್ಯಾಂಗ್​ನ ನಾಯಕತ್ವ ವಹಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಭಾಷಣಕ್ಕೆ ವಂದನಾ ನಿಲುವಳಿ ಚರ್ಚೆ ವೇಳೆ ಪ್ರಧಾನಿ ಮಾತನಾಡಿದರು. ಹಲವು ಚುನಾವಣಾ ಸೋಲುಗಳ ನಂತರವೂ ಕಾಂಗ್ರೆಸ್​ನ ‘ಸೊಕ್ಕು’ ಕಡಿಮೆ ಆಗಿಲ್ಲ. ಈಗ ಮಾಡುತ್ತಿರುವ ‘ತಪು್ಪಗಳ’ ಮೂಲಕ ಮುಂದಿನ 100 ವರ್ಷಗಳ ಕಾಲ ಅಧಿಕಾರ ಚುಕ್ಕಾಣಿ ಹಿಡಿಯವುದಿಲ್ಲ ಎಂಬ ಭಾವನೆಯನ್ನು ಅದು ವ್ಯಕ್ತಪಡಿಸುತ್ತಿರುವಂತೆ ಇದೆ ಎಂದು ಕುಟುಕಿದರು.

ಎಲ್ಲೆ ಮೀರಿದ ಕಾಂಗ್ರೆಸ್: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾಂಗ್ರೆಸ್ ‘ಎಲ್ಲ ಮಿತಿಗಳನ್ನೂ ಮೀರಿದೆ’. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ರೋಗ ಹರಡುವುದನ್ನು ತಡೆಯಲು ಲಾಕ್​ಡೌನ್ ಘೋಷಿಸಲಾಗಿತ್ತು. ಆಗ ಕಾಂಗ್ರೆಸ್ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಮುಗ್ಧ ಕಾರ್ವಿುಕರನ್ನು ಬೆದರಿಸುತ್ತಿತ್ತು. ಅವರು ತಮ್ಮ ಸ್ವಂತ ಊರಿಗೆ ಓಡಿ ಹೋಗುವಂತೆ ಮಾಡಿತು ಎಂದು ಪ್ರಧಾನಿ ಟೀಕಿಸಿದರು.

ಕುರುಡು ವಿರೋಧ ಭೂಷಣವಲ್ಲ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟು ರಚನಾತ್ಮಕ ಟೀಕೆಗಳು ಎದುರಾದರೆ ಅದನ್ನು ಸ್ವಾಗತಿಸಬಹುದು. ಅಂತಹ ಟೀಕೆಗಳು ಉಜ್ವಲ ಪ್ರಜಾಪ್ರಭುತ್ವ ವ್ಯವಸ್ಥೆಯ ಭೂಷಣ ಎಂದೇ ಬಣ್ಣಿಸಬಹುದು. ಆದರೆ, ವಿರೋಧ ಮಾಡುವುದಕ್ಕೆಂದೇ ಕುರುಡು ವಿರೋಧ ಮಾಡುವ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಭೂಷಣ ಎಂದೆನಿಸಲಾರದು. ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಅನುದಾನ ಹಂಚಿಕೆ ಕುಸಿತ: ಮುಂಗಡಪತ್ರದಲ್ಲಿ ಕೃಷಿ ಅನುದಾನ ಹಂಚಿಕೆ ಒಟ್ಟಾರೆಯಾಗಿ ಶೇಕಡ 3.8 ಕುಸಿತ ಕಂಡಿದೆ. ಕೃಷಿ ಕ್ಷೇತ್ರಕ್ಕೆ ಅನುದಾನ ಏರಿಕೆ ನಿರೀಕ್ಷಿಸುತ್ತಿದ್ದವರಿಗೆ ನಿರಾಸೆ ಆಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ರಾಜ್ಯಸಭೆಯಲ್ಲಿ ಸೋಮವಾರ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿಲುವಳಿಗೆ ಉತ್ತರಿಸಿದ ಅವರು, 2022ರ ವೇಳೆಗೆ ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈ ಮುಂಗಡಪತ್ರದಲ್ಲಿ ಅದರ ಉಲ್ಲೇಖವೇ ಇಲ್ಲ. ಕೃಷಿ ಇನ್​ಪುಟ್​ಗೆ ಸಂಬಂಧಿಸಿದ ಜಿಎಸ್​ಟಿ ರದ್ದುಗೊಳಿಸುವಂತೆ ಆಗ್ರಹಿಸಿದ್ದು ಯಾರ ಕಿವಿಗೂ ಬಿದ್ದಿಲ್ಲ. ಆಹಾರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಡಿಮೆ ಆಗಿದ್ದು, ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಸ್ತರಿಸಬೇಕಾದ ಸನ್ನಿವೇಶದಲ್ಲಿ ಎಂಎಸ್​ಪಿಗೆ ಮೀಸಲಿಟ್ಟ ಅನುದಾನ ಕಡಿಮೆ ಮಾಡಲಾಗಿದೆ. ಕೃಷಿಯಲ್ಲಿ ಕೀಟನಾಶಕ, ರಾಸಾಯನಿಕ ಸಿಂಪಡಣೆಗೆ ಡ್ರೋನ್ ಬಳಕೆ ಯೋಜನೆಯಿಂದ ಶೇಕಡ 82 ಸಾಮಾನ್ಯ ಕೃಷಿಕರಿಗೆ ಏನು ಪ್ರಯೋಜನ? ಎಂದು ಕಳವಳದೊಂದಿಗೆ ಪ್ರಶ್ನಿಸಿದರು. ಇದೇ ವೇಳೆ, 2022-23ನೇ ಸಾಲನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಎಂದರು.

ಪ್ರಧಾನಿ ಕೇಳಿದ ಪ್ರಶ್ನೆಗಳು

  • ಮಹಾತ್ಮ ಗಾಂಧಿ ಕನಸನ್ನು ನನಸು ಮಾಡುವ ‘ವೋಕಲ್ ಫಾರ್ ಲೋಕಲ್’ ಜಾರಿಗೊಳಿಸಿದ ವೇಳೆ ವಿಪಕ್ಷಗಳು ಅದನ್ನೂ ಲೇವಡಿ ಮಾಡಿದ್ದು ಯಾಕೆ?
  • ಯೋಗ, ಫಿಟ್ ಇಂಡಿಯಾ ಉಪಕ್ರಮಗಳನ್ನು ಸರ್ಕಾರ ಜಾರಿಗೊಳಿಸಿತು. ಆಗಲೂ ವಿಪಕ್ಷಗಳು ಆ ಉಪಕ್ರಮಗಳನ್ನೇ ಲೇವಡಿ ಮಾಡಿದ್ದು ಯಾಕೆ?
  • ಕಾಂಗ್ರೆಸ್ ಯಾವತ್ತೂ ರಚನಾತ್ಮಕವಾಗಿ ಯೋಚಿಸಿದ್ದೇ ಇಲ್ಲ. ಅದು ವಿಭಜನೆಯ ಹಾದಿಯಲ್ಲೇ ಮುಂದುವರಿದಿದೆ. ಅದರ ಎಲ್ಲ ನಡವಳಿಕೆ ಈ ಮನಸ್ಥಿತಿಯ ಪ್ರತಿರೂಪ ಅಲ್ಲವೆ?
  • ತಮಿಳುನಾಡಿನಲ್ಲಿ ವಾಯುಪಡೆ ಕಾಪ್ಟರ್ ದುರಂತಕ್ಕೀಡಾಗಿ ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಜನರಲ್ ಬಿಪಿನ್ ರಾವತ್ ಕೊನೆಯುಸಿರೆಳದ ಸಂದರ್ಭದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ನಿಜಕ್ಕೂ ತಮಿಳರ ಭಾವನೆಯನ್ನು ಘಾಸಿಗೊಳಿಸುವಂಥದ್ದೇ ಆಗಿರಲಿಲ್ಲವೆ?
  • ಲೋಕಸಭೆಯಲ್ಲಿ ಅವರು ಮಾಡಿದ ಭಾಷಣ ಗಮನಿಸಿದರೆ, ಅದು ಜನರನ್ನು ಪ್ರಚೋದಿಸುವ ಮಾದರಿಯಲ್ಲೇ ಇರಲಿಲ್ಲವೇ? ಜನರು ಸರಿದಾರಿಯಲ್ಲಿ ಮುನ್ನಡೆಯಲಾರಂಭಿಸಿದರೆ ಅದಕ್ಕೆ ಅಡ್ಡಿ ಮಾಡುವುದೇ ಅವರ ಕೆಲಸವಾಗಿತ್ತಲ್ಲವೇ?
ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯವಾದ ಕಲ್ಲಿದ್ದಲು ಬೇಡಿಕೆ ಈಡೇರಿಸುವುದಕ್ಕೆ ಭಾರತ ಕಲ್ಲಿದ್ದಲು ಆಮದನ್ನೇ ನೆಚ್ಚಿಕೊಂಡಿದೆ. 2022-23ಕ್ಕೆ 727 ಮಿಲಿಯನ್ ಟನ್ ಪ್ರಾದೇಶಿಕ ಕಲ್ಲಿದ್ದಲು ಉತ್ಪಾದನೆ ಅಂದಾಜಿಸಲಾಗಿದೆ | ಪ್ರಲ್ಹಾದ್ ಜೋಶಿ ಕಲ್ಲಿದ್ದಲು ಸಚಿವ
  • ಲೋಕಸಭೆಯಲ್ಲಿ 100 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
  • ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿಲುವಳಿಗೆ ಧ್ವನಿ ಮತದಲ್ಲಿ ಅಂಗೀಕಾರ.
  • ಭಾನುವಾರ ನಿಧನರಾದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಂಸತ್ತಿನ ಉಭಯ ಸದನಗಳು ಜಂಟಿಯಾಗಿ ನುಡಿನಮನ ಸಲ್ಲಿಸಿದವು. ಗೌರವಾರ್ಥ ಒಂದು ಗಂಟೆ ಕಲಾಪ ಮುಂದೂಡಿದವು.

ಒವೈಸಿ ಮೇಲಿನ ದಾಳಿ ತನಿಖೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರ ಕಾರಿನ ಮೇಲೆ ಫೆ.3ರಂದು ಪಶ್ಚಿಮ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದ ಗುಂಡಿನ ದಾಳಿಯ ತನಿಖೆ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಬಂಧಿಸಲಾಗಿದೆ. ಒವೈಸಿ ಅವಶ್ಯವಾಗಿ ಝೆಡ್ ಕೆಟಗರಿ ಭದ್ರತೆಯನ್ನು ಸ್ವೀಕರಿಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಹೇಳಿದರು.