ನ್ಯೂಸ್

ಕಾಂಗ್ರೆಸ್ ನಾಯಕರ ಮಾತುಗಳು ನಾಚಿಕೆಗೇಡು: ಎನ್.ರವಿಕುಮಾರ್ ವಾಗ್ದಾಳಿ | World knows the strength

ಬೆಂಗಳೂರು: ಆಪರೇಷನ್ ಸಿಂಧೂರ ಪರಾಕ್ರಮಕ್ಕೆ ಪಾಕಿಸ್ತಾನ ಬೆಚ್ಚಿ ಬಿದ್ದು, ವಿರಾಮಕ್ಕೆ ಅಂಗಾಲಾಚಿದ್ದು ವಿಶ್ವಕ್ಕೆ ಗೊತ್ತಿದೆ. ಆದರೆ ಕಾರ್ಯಾಚರಣೆ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಸೇನೆ ಬಗ್ಗೆ ಕಾಂಗ್ರೆಸ್ ನಾಯಕರು ಹಗುರ ಮಾತನಾಡುತ್ತಿರುವುದು ನಾಚಿಕೆಗೇಡು ಎಂದು ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ವಾಗ್ದಾಳಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಪಹೆಲ್ಗಾಮ್‌ನಲ್ಲಿ ಅಮಾಯಕರನ್ನು ಉಗ್ರರು ಹತ್ಯೆ ಮಾಡಿದ್ದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡದ್ದು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇಷ್ಟವಿದ್ದಂತಿಲ್ಲ ಎಂದು ಕುಟುಕಿದರು.

ಭಯೋತ್ಪಾದನೆ ಸಹಿಸಲ್ಲವೆಂದು ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಟ್ಟಿನೋಡಿಕೊಳ್ಳುವಂತೆ ಭಾರತ ಪಾಠ ಕಲಿಸಿದೆ. ಹಿಂದೆ ಸರ್ಜಿಕಲ್ ಸ್ಟ್ರೈಕ್, ಈಗ ಆಪರೇಷನ್ ಸಿಂಧೂರ ವಿಷಯದಲ್ಲಿ ನಮ್ಮ ಸೇನೆಗೆ ಅಪಮಾನಿಸುವಾಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಗೋಸುಂಬೆತನ ಬಯಲು

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾಕದರು ನಡೆಸಿದ ದುಷ್ಕೃತ್ಯದ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗಲಿಲ್ಲ. ಈಗ 56 ಇಂಚಿನ ಎದೆ, ಏ.22ರಿಂದ ಮೇ 12ರವರೆಗೆ ದೇಶದ ಪ್ರಧಾನಿ ಎಲ್ಲಿದ್ದರು ? ಎಂದೆಲ್ಲ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿ ತಮ್ಮ ಗೋಸುಂಬೆತನ ಬಯಲು ಮಾಡಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿಯವರು ಎಲ್ಲಿದ್ದರು ಎಂಬುದು ದೇಶದ ಜನರಿಗೆ ಗೊತ್ತಿದೆ. ಭಾರತೀಯ ಸೇನೆಗೆ ಸ್ವಾತಂತ್ರ್ಯ ನೀಡಿ ಭಯೋತ್ಪಾದಕರು ನೆಲೆಗಳ ಧ್ವಂಸ, ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದೂ ವಿಶ್ವಕ್ಕೆ ಗೊತ್ತಾಗಿದೆ. ದೇಶದ ಭದ್ರತೆ, ಸೇನೆ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದರು.