ನ್ಯೂಸ್

ಮುಂದಿನ ಲೋಕಸಬಾ ಚುನಾವಣೆಯೊಳಗೆ ಪುಲ್ವಾಮಾದಂತಹ ಇನ್ನೊಂದು ದುರ್ಘಟನೆ ನಡೆದರೂ ನಡೆಯಬಹುದು: ಕಾಂಗ್ರೆಸ್​ನ ಮಾಜಿ ಸಂಸದ

ನವದೆಹಲಿ: ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಸಿಆರ್​ಪಿಎಪ್​ ಯೋಧರ ಮೇಲೆ ದಾಳಿ ನಡೆದು ನಿನ್ನೆಗೆ ಒಂದು ವರ್ಷ ಕಳೆದಿದೆ. ಈ ದಾಳಿ ಯಾರು ಮಾಡಿದ್ದು, ಇದಕ್ಕೆ ಬೆಂಬಲಿಸಿದ್ದು ಯಾರು ಎನ್ನುವ ಕುರಿತಾಗಿ ಆಡಳಿತ ಮತ್ತು ವಿರೋಧ ಪಕ್ಷಗಳಿಂದ ಭಾರೀ ಪ್ರಮಾಣದ ಚರ್ಚೆಯಾಗುತ್ತಿದೆ. ಕಾಂಗ್ರೆಸ್​ನ ಮಾಜಿ ಸಚಿವರೊಬ್ಬರು ಮುಂದಿನ ಲೋಕಸಭಾ ಚುನಾವಣೆಯೊಳಗೆ ಬಿಜೆಪಿಯವರು ಮತ್ತೊಂದು ದಾಳಿ ನಡೆಸಿದರೂ ನಡೆಸಬಹುದು ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಕುರಿತಾಗಿ ಟ್ವೀಟ್​ ಮಾಡಿರುವ ಕಾಂಗ್ರೆಸ್​ನ ಮಾಜಿ ಸಂಸದ ಉದಿತ್​ ರಾಜ್​, "ಮುಂದಿನ ಲೋಕಸಭಾ ಚುನಾವಣೆ 2024 ಒಳಗೆ ಪುಲ್ವಾಮಾ ದಾಳಿಯಂತದ್ದು ಇನ್ನೊಂದು ದಾಳಿ ನಡೆದರೂ ನಡೆಯಬಹುದು" ಎಂದು ಹೇಳಿದ್ದಾರೆ. ಪುಲ್ವಾಮಾದಲ್ಲಿದ್ದ ಭದ್ರತೆಯನ್ನು ಪ್ರಶ್ನಿಸಿರುವ ಅವರು ಸಿಪಿಆರ್​ಎಫ್​ ಯೋಧರನ್ನು ರಸ್ತೆಯಲ್ಲಿ ಸ್ಥಳಾಂತರಿಸುವಂತಿಲ್ಲ, ಅವರನ್ನು ವಿಮಾನಗಳಲ್ಲಿ ಮಾತ್ರವೇ ಸ್ಥಳಾಂತರಿಸಬೇಕು ಎಂದು ಗೃಹ ಸಚಿವಾಲಯವು ಮೊದಲೇ ತಿಳಿಸಿದ್ದರು ರಸ್ತೆಯಲ್ಲಿಯೇ ಅವರನ್ನು ಸ್ಥಳಾಂತರಿಸುತ್ತಿದ್ದದ್ದು ಏಕೆ? ಎಂದು ಕೇಳಿದ್ದಾರೆ.

ನಿನ್ನೆ ರಾಹುಲ್​ ಗಾಂಧಿಯವರು ಪುಲ್ವಾಮಾ ದಾಳಿಯ ಕುರಿತಾಗಿ ಮೂರು ಪ್ರಶ್ನೆಗಳನ್ನು ಆಡಳಿತ ಪಕ್ಷಕ್ಕೆ ಕೇಳಿದ್ದರು. ಈ ದಾಳಿಗೆ ಯಾರು ಹೊಣೆಗಾರರು? ಅದರ ತನಿಖೆ ಎಲ್ಲಿವರೆಗೆ ನಡೆದಿದೆ? ಈ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಯಿತು ಎಂದು ಕಾಂಗ್ರೆಸ್​ನ ನಾಯಕ ಪ್ರಶ್ನೆಗಳನ್ನು ಕೇಳಿದ್ದರು. ಇಂದು ರಾಹುಲ್​ ಗಾಂಧಿಯವರ ಬೆಂಬಲಕ್ಕೆ ನಿಂತ ಉದಿತ್​ ರಾಜ್​​ "ರಾಹುಲ್​ ಗಾಂಧಿಯವರ ಪ್ರಶ್ನೆಗಳು ಸರಿಯಾಗಿವೆ. ಪುಲ್ವಾಮಾ ದಾಳಿಯ ಫಲಿತಾಂಶವನ್ನು ನಾವು ತಿಳಿದುಕೊಳ್ಳಲೇಬೇಕು" ಎಂದು ಹೇಳಿದ್ದಾರೆ. (ಏಜೆನ್ಸೀಸ್​)