ನವದೆಹಲಿ: ಕಳೆದ ವರ್ಷ ಪುಲ್ವಾಮ ದಾಳಿಯಲ್ಲಿ ಹತರಾದ ಯೋಧರನ್ನು ಸ್ಮರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಯನ್ನು ಕೇಳಿದ್ದಾರೆ.
ಪುಲ್ವಾಮ ದಾಳಿಯ ವಷಾರ್ಚರಣೆಯ ಅಂಗವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಇಂದು ನಾವು ಪುಲ್ವಾಮ ದಾಳಿಯಲ್ಲಿ ಹತರಾದ ನಮ್ಮ 40 ಸಿಆರ್ಪಿಎಫ್ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಮೊದಲು ನಾವು ಈ ಪ್ರಶ್ನೆಗಳನ್ನು ಕೇಳೋಣ.
1) ದಾಳಿಯಿಂದ ಹೆಚ್ಚು ಲಾಭ ಪಡೆದವರು ಯಾರು?
2) ದಾಳಿಯ ವಿಚಾರಣೆಯ ಫಲಿತಾಂಶ ಏನು?
3) ದಾಳಿಗೆ ಅವಕಾಶ ನೀಡಿದ ಈ ಭದ್ರತಾ ಕೊರತೆಗೆ ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆಗಾರರಾಗಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧೀಯವರ ಟ್ವೀಟಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, "ರಾಹುಲ್ ಗಾಂಧಿಯವರು ಜೈಶ್-ಎ-ಮೊಹಮ್ಮದ್ ಮತ್ತು ಎಲ್ಇಟಿ ಉಗ್ರರ ಮೇಲೆ ಸಹಾನುಭೂತಿ ಹೊಂದಿರುವವರು. ಇದು ಉಗ್ರರಿಗೆ ಭಾರತ ಸರ್ಕಾರ ಮಾತ್ರವಲ್ಲದೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ." ಎಂದು ತಿಳಿಸಿದೆ.
2019ರ ಫೆ.14ರಂದು ಜೈಷ್-ಎ-ಮೊಹಮ್ಮದ್ನ ಉಗ್ರನೊಬ್ಬ 80 ಕೆ.ಜಿ. ಆರ್ಡಿಎಕ್ಸ್ ಸ್ಫೋಟಕ ತುಂಬಿದ್ದ ಕಾರಿನಲ್ಲಿ ಬಂದು ಯೋಧರನ್ನು ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಸ್ಫೋಟಕ ಸ್ಫೋಟಿಸಿದ್ದರಿಂದಾಗಿ 40 ಯೋಧರು ಸ್ಥಳದಲ್ಲೇ ಮೃತ ಪಟ್ಟಿದ್ದರು. (ಏಜೆನ್ಸೀಸ್)