ಬೆಂಗಳೂರು:
ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದು, ಅವರನ್ನು ಮುಖಂಡರು ಭೇಟಿ ಮಾಡದೇ ಬೇರೆ ಇನ್ಯಾರನ್ನು ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸ ಹಾಗೂ ವಿ.ಆರ್.ಸುದರ್ಶನ್ ಅವರ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಸ್ವೀಕರಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಗೊತ್ತಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ಸಧ್ಯಕ್ಕೆ ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರು ಖರ್ಗೆ ಅವರನ್ನು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ವದಂತಿ ಮೂಡುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿ, ನಮಗೂ ಮಾಧ್ಯಮದವರಿಗೂ ಸಂಬಂಧ ಇರುವಂತೆ ನಮ್ಮ ನಾಯಕರಿಗೂ ನಮ್ಮ ಅಧ್ಯಕ್ಷರಿಗೂ ಸಂಬಂಧ ಇರುತ್ತದೆ. ನಾನು ದಿನ ನಿತ್ಯ ಅವರ ಸಂಪರ್ಕದಲ್ಲಿ ಇದ್ದೇನೆ. ಪಕ್ಷದ ಬೆಳವಣಿಗೆಗಳ ವರದಿ ನೀಡುತ್ತಿರುತ್ತೇವೆ. ಅದಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದರು.
ಸಚಿವರು, ಶಾಸಕರು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸ್ವಾಭಾವಿಕ. ಇದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ನನ್ನನ್ನೂ ನೂರಾರು ಮಂದಿ ಬಂದು ಭೇಟಿ ಮಾಡುತ್ತಾರೆ. ಅದೆಲ್ಲದಕ್ಕೂ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವೇ? ರಾಜಕೀಯ, ಆಡಳಿತ ಹಾಗೂ ಕೆಲವು ಸನ್ನಿವೇಶಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದು ಸಹಜ ಎಂದು ತಿಳಿಸಿದರು.
ವಾರದಲ್ಲಿ ಇತರೆ ಸಮಿತಿಗಳ ವರದಿ ಸಲ್ಲಿಕೆ:
ಲೋಕಸಭೆ ಚುನಾವಣೆ ಸೋಲು, ಗೆಲುವಿನ ಬಗ್ಗೆ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಿದ್ದೆವು. ವಿ.ಆರ್.ಸುದರ್ಶನ್ ಅವರ ನೇತೃತ್ವದ ಸಮಿತಿ ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳ ಪ್ರವಾಸ ಮಾಡಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಅಧ್ಯಯನ ಮಾಡಿ ಹಾಗೂ ರಾಜ್ಯದ ಎಲ್ಲಾ ವಲಯಗಳ ವರದಿ ಸೇರಿಸಿ, ನಂತರ ಅದನ್ನು ಚರ್ಚಿಸುತ್ತೇವೆ ಎಂದು ತಿಳಿಸಿದರು.
ಎಐಸಿಸಿ ಕೂಡ ಇಂತಹ ಸಮಿತಿ ಕಳುಹಿಸಿತ್ತು ಎಂದು ಕೇಳಿದಾಗ, ಅವರು ರಾಜ್ಯದ ಕೇಂದ್ರ ಕಚೇರಿಗೆ ಬಂದು ಹೋಗಿದ್ದರು. ನಮ್ಮ ಸಮಿತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಲು ಸೂಚಿಸಿದ್ದೆ. ಬೇರೆ ಭಾಗಗಳ ಸಮಿತಿಗಳು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ತಿಳಿಸುತ್ತೇನೆ ಎಂದರು. ವರದಿಯಲ್ಲಿ ಕೆಲವು ಸಲಹೆ, ಸೂಚನೆಗಳನ್ನು ನೀಡಿರುತ್ತಾರೆ. ಪಕ್ಷ, ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗುತ್ತದೆ ಎಂದರು.
ನಿಗಮ ಮಂಡಳಿ ನೇಮಕ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿ, ಈಗಾಗಲೇ ಸಮಿತಿ ರಚಿಸಿದ್ದು, ಶಾಸಕರು ಸೇರಿದಂತೆ ಮುಖಂಡರ ಜತೆ ಚರ್ಚೆ ಮಾಡಲಾಗುವುದು. ಮುಂದಿನ ವಾರ ಅಂತಿಮವಾಗಲಿದೆ ಎಂದು ತಿಳಿಸಿದರು.
ನಾನೊಬ್ಬನೆ ತೀರ್ಮಾನಿಸಲಾಗದು:
ಜಾತಿ ಗಣತಿ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯವೇ ಬೇರೆ, ಪಕ್ಷದ ಅಧ್ಯಕ್ಷನಾಗಿ ಅಭಿಪ್ರಾಯ ಬೇರೆ. ಪಕ್ಷದ ನೀತಿಯನ್ನು ನಾನೊಬ್ಬನೇ ತೀರ್ಮಾನಿಸಲು ಆಗುವುದಿಲ್ಲ. ಇಡೀ ಪಕ್ಷ ಹಾಗೂ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ರಾಹುಲ್ ಗಾಂಧಿ ನಮಗೆ ನಿರ್ದಿಷ್ಟ ನಿರ್ದೇಶನ ನೀಡಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ಕೆಲವು ವಿಚಾರ ಪ್ರಸ್ತಾಪವಾಗಿವೆ. ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ವೈಯಕ್ತಿಕವಾಗಿ ಮಾತನಾಡಲ್ಲ:
ಎಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನಾನು ಗೃಹ ಸಚಿವನಲ್ಲ, ಈ ಬಗ್ಗೆ ಗೊತ್ತಿಲ್ಲ. ನಾನು ದಸರಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಚನ್ನಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಯಲ್ಲಿ ನಿರತನಾಗಿದ್ದೆ. ನನ್ನ ಕನಸಿನ ಯೋಜನೆ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಿರುವ ಕೆಪಿಎಸ್ ಶಾಲೆ ಉದ್ಘಾಟನೆ ಮಾಡಲಾಗಿದೆ. ಕಣ್ವ ನದಿಗೆ ಕಟ್ಟಲಾಗುತ್ತಿರುವ 9 ಸೇತುವೆಗಳ ಪೈಕಿ ಆರು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ ಎಂದರು.
ಚಿತ್ರ ಶೀರ್ಷಿಕೆ:
ಕಳೆದ ಲೋಕಸಭೆ ಚುನಾವಣೆ ಫಲಿತಾಂಶ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಸಂಘಟನೆ ಕುರಿತು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನೇತೃತ್ವದ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಲ್ಲಿಸಿತು. ಸಮಿತಿ ಸದಸ್ಯರಾದ ಶಾಸಕ ನಂಜೇಗೌಡ, ಸಿ.ಎಸ್.ದ್ವಾರಕನಾಥ್ ಉಪಸ್ಥಿತರಿದ್ದರು.