ನ್ಯೂಸ್

Delhi | 5,600 ಕೋಟಿ ಮೌಲ್ಯದ ಡ್ರಗ್ ಸ್ಮಗ್ಲಿಂಗ್ ಕಿಂಗ್​ಪಿನ್ ಕಾಂಗ್ರೆಸ್ ಮುಖಂಡ? ಬಿಜೆಪಿ ಸ್ಫೋಟಕ ಹೇಳಿಕೆ

Congress denies links to 'kingpin' of Rs 5,000-crore drug bust in Delhi

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬುಧವಾರ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 562 ಕೆಜಿ ಕೊಕೇನ್ ಕೊಕೇನ್ ಮಾಫಿಯಾದ ಕಿಂಗ್​ಪಿನ್ ಬಂಧಿತ ಆರೋಪಿ ದೆಹಲಿ ಯುವ ಕಾಂಗ್ರೆಸ್​ನ ಆರ್​ಟಿಐ ಸೆಲ್​ನ ಅಧ್ಯಕ್ಷ ಎಂಬುದಾಗಿ ಭಾರತೀಯ ಜನತಾ ಪಕ್ಷ ಗಂಭೀರವಾಗಿ ಆರೋಪಿಸಿದ್ದಾರೆ.

ಡ್ರಗ್ಸ್ ಡೀಲರ್ಸ್​ಗಳ ಜೊತೆ ಶಾಮೀಲಾಗುವ ಮೂಲಕ ಕಾಂಗ್ರೆಸ್​ ಪಕ್ಷ ದೇಶವನ್ನು ನಾಶಗೊಳಿಸಲು ಹೊರಟಿದೆ ಎಂದು ಬಿಜೆಪಿ ವಕ್ತಾರ, ಸಂಸದ ಸುಧಾಂಶು ತ್ರಿವೇದಿ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್​ ಈ ಸಂಬಂಧ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.

ಒಂದು ವೇಳೆ ಮಾದಕ ವಸ್ತುವಿನ ಹಣವನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆಯೇ ಎಂದು ತ್ರಿವೇದಿ ಪ್ರಶ್ನಿಸಿದ್ದು, ಅದೇ ರೀತಿ ಆರೋಪಿ ಕಿಂಗ್​ಪಿನ್ ತುಷಾರ್ ಗೋಯಲ್ ಜತೆ ಕಾಂಗ್ರೆಸ್​ ಪಕ್ಷ ಯಾವ ರೀತಿ ಸಂಬಂಧ ಹಾಗೂ ವ್ಯವಹಾರ ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದೆ.

ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಹರ್ಯಾಣದಲ್ಲಿ ಮುಕ್ತ ಅವಕಾಶ ನೀಡುವ ಕುರಿತು ಡ್ರಗ್ಸ್ ಡೀಲರ್ಸ್ ಮತ್ತು ಕಾಂಗ್ರೆಸ್​ ನಡುವೆ ಒಪ್ಪಂದ ನಡೆದಿರಬಹುದು ಎಂದು ತ್ರಿವೇದಿ ಆರೋಪಿಸಿದ್ದಾರೆ. ಆರೋಪಿ ತುಷಾರ್ ಗೋಯಲ್ (40) ಎಂಬಾತನನ್ನು ಬಂಧಿಸಲಾಗಿದ್ದು, ಈ ಹಿಂದೆ 2022 ರವರೆಗೆ ದೆಹಲಿ ಪ್ರದೇಶ ಕಾಂಗ್ರೆಸ್‌ನ ಆರ್‌ಟಿಐ ಸೆಲ್‌ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾಗಿ ಆತ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ.

ಕಾಂಗ್ರೆಸ್​ ಹಿರಿಯ ನಾಯಕರೊಂದಿಗೆ ಸಂಪರ್ಕ

ಆರೋಪಿ ಗೋಯಲ್ ಕಾಂಗ್ರೆಸ್​ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಚಿತ್ರಗಳನ್ನು ಹೊಂದಿದ್ದರು ಮಾತ್ರವಲ್ಲದೆ ಹೂಡಾ ಅವರ ಮೊಬೈಲ್ ಸಂಖ್ಯೆಯನ್ನು ಸಹ ಹೊಂದಿದ್ದಾರೆ ಎಂದು ತ್ರಿವೇದಿ ಹೇಳಿದ್ದಾರೆ. ಹೂಡಾ ಕುಟುಂಬದವರು ವಿವರಣೆ ನೀಡಬೇಕು ಎಂದರು.

ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ

ಕೊಕೇನ್ ಅನ್ನು ವಿವಿಧ ರಾಜ್ಯಗಳಿಂದ ರಸ್ತೆ ಮೂಲಕ ದೆಹಲಿಗೆ ಕಳ್ಳಸಾಗಣೆ ಮಾಡಲಾಗಿದ್ದು, ಗಾಂಜಾ ಥಾಯ್ಲೆಂಡ್‌ನ ಫುಕೆಟ್‌ನಿಂದ ತರಲಾಗಿದೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಕ್ರಿಪ್ಟೋಕರೆನ್ಸಿಯನ್ನು ಬಳಸಿದ್ದಾರೆ. ಕೊಕೇನ್ ಸಾಗಣೆಯ ಹಿಂದೆ ದುಬೈ ಮೂಲದ ಪ್ರಮುಖ ಉದ್ಯಮಿ ಭಾಗಿಯಾಗಿರುವ ಬಗ್ಗೆ ಮೂಲಗಳು ಸುಳಿವು ನೀಡಿವೆ. ರಾಜಧಾನಿಯ ಉನ್ನತ ಮಟ್ಟದ ಪಕ್ಷಗಳಿಗೆ ಇದನ್ನು ಸರಬರಾಜು ಮಾಡಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.