ನ್ಯೂಸ್

ನೀರಾವರಿ ವಿಚಾರದಲ್ಲಿ ಕಾಂಗ್ರೆಸ್​ನಿಂದಲೇ ಅನ್ಯಾಯ: ಮೇಕೆದಾಟು ಯೋಜನೆಗೆ ಕೈ ಪಾದಯಾತ್ರೆ ಹಾಸ್ಯಾಸ್ಪದ; ಸಚಿವ ಕಾರಜೋಳ ತಿರುಗೇಟು

ಬೆಂಗಳೂರು: ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಾಸ್ಯಾಸ್ಪದ. ನೀರಾವರಿ ವಿಚಾರದಲ್ಲಿ ನಿಜಕ್ಕೂ ಅನ್ಯಾಯ ಮಾಡಿದ್ದೇ ಕಾಂಗ್ರೆಸ್ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

2010ರಲ್ಲಿ ನ್ಯಾ.ಬ್ರಿಜೇಶ್​ಕುಮಾರ್ ನೇತೃತ್ವದ ನ್ಯಾಯಾಧಿಕರಣ ತೀರ್ಪು ನೀಡಿತ್ತು. ಆಗ ನಮ್ಮ ಸರ್ಕಾರ ಯೋಜನೆ ಜಾರಿಗೆ ಕಾರ್ಯಪ್ರವೃತ್ತವಾಗಿತ್ತು. ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 17,702 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದೆವು. ಆದರೆ, ಅದಕ್ಕೂ ಮುಂಚೆ ಕಾಂಗ್ರೆಸ್ ಪಾದಯಾತ್ರೆ ಮಾಡಿತು. ‘ಕಾಂಗ್ರೆಸ್ ನಡಿಗೆ-ಕೃಷ್ಣ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಎಂದೂ ನಡೆಯಲಾರದವರು ಈ ಪಾದಯಾತ್ರೆಯಲ್ಲಿ ನಡೆದು ನಡೆದೂ ಕಾಲನ್ನು ಆನೆ ಕಾಲುಗಳಾಗಿಸಿಕೊಂಡರು. ತರುವಾಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮಾಡಿದ್ದಾರೂ ಏನು ಎಂದು ಪ್ರಶ್ನಿಸಿದರು.

ಕೂಡಲ ಸಂಗಮನ ಆಣೆ ಕಾಣೆ: ಕೂಡಲ ಸಂಗಮಕ್ಕೆ ಬಂದು ಸಂಗಮನಾಥನ ಎದುರು ಆಣೆ ಮಾಡಿದರು. ಕೃಷ್ಣಾ ನೀರಾವರಿ ವಿಚಾರದಲ್ಲಿ ಬಿಜೆಪಿ ಅನ್ಯಾಯ ಮಾಡಿದೆ. ಒಂದು ರೂಪಾಯಿ ಯನ್ನೂ ಕೊಟ್ಟಿಲ್ಲ. ನಮ್ಮ ಕೈಗೆ ಅಧಿಕಾರ ಕೊಡಿ ಎಂದು ಕೇಳಿದರು. ಆಗ ಕೃಷ್ಣಾ ಕೊಳ್ಳದ ಏಳೂ ಜಿಲ್ಲೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತು. ಆಗ ಆ ಭಾಗದಿಂದ ಗೆದ್ದವನು ನಾನೊಬ್ಬನೆ ಎಂದು ಕಾರಜೋಳ ಹೇಳಿದರು.

ಇವರು ಮಾಡಿದ್ದಾದರೂ ಏನು?: 2013-2018ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. 2018-2019ರಲ್ಲಿ ಕಾಂಗ್ರೆಸ್ ಕಪಿಮುಷ್ಠಿಯಲ್ಲಿದ್ದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇತ್ತು. ಇವರೇನು ಮಾಡಿದರು? ಏನೂ ಮಾಡಲಿಲ್ಲ. ಪ್ರತಿ ವರ್ಷ 10 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹೇಳಿ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಅವರ ಒಟ್ಟು ಅವಧಿಯಲ್ಲಿ ಇಟ್ಟದ್ದು 7,728 ಕೋಟಿ ರೂ. ಮಾತ್ರ. ಅದರಲ್ಲಿ ಖರ್ಚಾದದ್ದು 3636 ಕೋಟಿ ರೂ.ಗಳಷ್ಟೇ ಎಂದು ಮಾಹಿತಿ ಬಿಚ್ಚಿಟ್ಟರು. ಮೇಕೆದಾಟು ನಾವು ಮಾಡೇ ಮಾಡುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಜನ ಕಾಂಗ್ರೆಸ್ ನಂಬುವುದಿಲ್ಲ ಎಂದರು.

ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ಸಿಎಂ ಆಗಿದ್ದವರು. ಹುಟ್ಟಿನಿಂದ ಕಾಂಗ್ರೆಸ್​ನವರಲ್ಲ. ಜೆಡಿಎಸ್​ನಲ್ಲಿ ಬೆಳೆದು ದೊಡ್ಡವರಾದವರು. ಅವರು ಪಕ್ಷಾಂತರ ಮಾಡಿದ್ದು ಏಕೆ? ಅವರು ಹೊಟ್ಟೆಪಾಡಿಗೆ ಹೋಗಿದ್ದರಲ್ಲವೆ? ಆದ್ದರಿಂದ ಬೇರೆಯವರ ಬಗ್ಗೆ ಸಣ್ಣ ಮಾತು ಆಡಬಾರದು.

| ಗೋವಿಂದ ಕಾರಜೋಳ ಜಲಸಂಪನ್ಮೂಲ ಸಚಿವ

ಕೋಳಿ, ಕುರಿ, ಅಕ್ಕಿ ಜಪ ಬಿಡಿ

ಕಾಂಗ್ರೆಸ್​ನವರು ಕೋಳಿ, ಕುರಿ, ಅಕ್ಕಿ ಕೊಟ್ಟೆವು ಎಂದು ಮಂತ್ರ ಪಠಣ ಮಾಡಿದ ಹಾಗೆ ಹೇಳಿದರೆ ಈಗ ಯಾರೂ ಬೆರಗಾಗಲು ಸಾಧ್ಯವಿಲ್ಲ ಎಂದು ಗೋವಿಂದ ಕಾರಜೋಳ ಕುಟುಕಿದರು. ಈಗ ದಲಿತರು ಶಿಕ್ಷಣ, ಉದ್ಯೋಗ, ಗೌರವದಿಂದ ಬದುಕುವ ವಾತಾವರಣ ಅಪೇಕ್ಷಿಸುತ್ತಿದ್ದಾರೆ. ಅದಕ್ಕಾಗಿ ಕುರಿ, ಕೋಳಿ, ಅಕ್ಕಿ ಜಪ ಬಿಡಿ. ಅದರಿಂದ ನಿಮ್ಮ ಗೌರವ, ಕೀರ್ತಿ ಹೆಚ್ಚಾಗುವುದಿಲ್ಲ ಎಂದು ಚುಚ್ಚಿದರು. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ ಗುಲಾಮರಲ್ಲ. ಸ್ವಾತಂತ್ರಾ್ಯನಂತರ ದಲಿತರು ಮತ್ತು ಅಲ್ಪಸಂಖ್ಯಾರನ್ನು ಗುಲಾಮರೆಂದು ಕಾಂಗ್ರೆಸ್ ತಿಳಿದುಕೊಂಡಿದೆ. ಪೇಟೆಂಟ್ ತೆಗೆದುಕೊಂಡ ಹಾಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೆ ನಾವೇ ಅಧಿಕಾರಕ್ಕೆ

ದಲಿತರು ಹೆಬ್ಬಟ್ಟಿನವರಲ್ಲ. ಪ್ರತಿ ಮನೆಯಲ್ಲೂ ಪದವೀಧರರು, ವಿದ್ಯಾವಂತರಿದ್ದಾರೆ. ದೇಶದ ಆಡಳಿತ, ಪಕ್ಷ, ರಾಜಕೀಯ ನೀತಿ, ಸಿದ್ಧಾಂತ ಗೊತ್ತಾಗುತ್ತವೆ. ಹಾಗಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದಲಿತರು ಕಾಂಗ್ರೆಸ್ ಕೈಬಿಟ್ಟಿದ್ದಾರೆ. ಅದರ ಪರಿಣಾಮ ಮೋದಿ ಪ್ರದಾನಿ ಆದರು. ಶೇ.70 ದಲಿತರು ಬಿಜೆಪಿ ಪರವಾಗಿದ್ದಾರೆ. ಇಂದಿರಾ ಗಾಂಧಿ ನಂತರ ಸ್ವತಂತ್ರವಾಗಿ ಒಂದು ಪಕ್ಷ ಅಧಿಕಾರಕ್ಕೆ ಬಂದದ್ದು ಮೋದಿ ಕಾಲದಲ್ಲಿ. ಕಾಂಗ್ರೆಸ್​ನವರು ಭ್ರಮೆಯಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ದೀನ-ದಲಿತರು, ಹಿಂದುಳಿದವರು ಬಿಜೆಪಿಗೆ ಬೆನ್ನಲುಬಾಗಿ ನಿಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.