ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ, ಮುಡಾ ಅಕ್ರಮ ಸೇರಿ ಲೂಟಿ ವಿರುದ್ಧ ಪ್ರತಿಪಕ್ಷ ಬಿಜೆಪಿ ಹೋರಾಟಕ್ಕೆ ಕಾಂಗ್ರೆಸ್ ಹೆದರಿದೆ. ಅಧಿಕಾರ ಬಳಸಿಕೊಂಡು ಕಳಂಕ ಮೆತ್ತಲು ಹವಣಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತಾವಧಿಯ ನೀತಿ, ನಿರ್ಧಾರಗಳ ಬಗ್ಗೆ ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬೇಕಾಗಿಲ್ಲ. ಕಾಂಗ್ರೆಸ್ ಶಾಸಕರಿಗೆ ನೀಡಿದ ಟಾಸ್ಕ್ ಲ ನೀಡುವುದಿಲ್ಲವೆಂದು ತಿವಿದರು.
ಬಿಜೆಪಿ ಆಡಳಿತದಲ್ಲಿ ಹಗರಣಗಳು ನಡೆದಿದ್ದರೆ ಒಂದೂವರೆ ವರ್ಷ ಕಾಲ ಸುಮ್ಮನಿದ್ದದ್ದು ಏಕೆ ? ಎಂದು ಕೇಳಿದ ಅಶೋಕ್, ಕಾಂಗ್ರೆಸ್ ಸರ್ಕಾರ ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು ಇಂತಹ ಪ್ರಯತ್ನ ಮಾಡುತ್ತಿದೆ ಎಂಬುದು ಜನರಿಗೂ ಅರ್ಥವಾಗುತ್ತಿದೆ ಎಂದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅದೇ ಮುಡಾ ಪ್ರಕರಣದಲ್ಲಿ ತನಿಖೆಗೆ ಆದೇಶಿಸಿದೆ. ಸಂವಿಧಾನಬದ್ಧವಾಗಿ ಸ್ಥಾಪಿತವಾದ ಕೋರ್ಟ್‌ನಿಂದ ಬಿಜೆಪಿಗೆ ಕ್ಲೀನ್‌ಚಿಟ್ ದೊರೆಯಲಿದ್ದು, ಕಾಂಗ್ರೆಸ್‌ನ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಅನಗತ್ಯ ಎಂದು ಛೇಡಿಸಿದರು.
ಸಂದಾಯವಾದ ತೆರಿಗೆಯಲ್ಲಿ ಪಾಲು, ಅನುದಾನ ಹಂಚಿಕೆ ಜತೆಗೆ ಕೇಂದ್ರ ಪುರಸ್ಕೃತ ಹಲವಾರು ಯೋಜನೆಗಳಡಿ ರಾಜ್ಯಕ್ಕೆ ಅನುದಾನ ಬರುತ್ತಿದೆ. ಆದರೆ ರಾಜ್ಯ ಸರ್ಕಾರವೇ ಜಿಲ್ಲೆಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪ್ರತ್ಯಾರೋಪಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ದನಿ ಎತ್ತುವ ಮುನ್ನ ಜಿಲ್ಲೆಗಳಿಗೆ ತಾರತಮ್ಯ ಮಾಡಿಲ್ಲವೆಂಬ ಬಗ್ಗೆ ರಾಜ್ಯ ಸರ್ಕಾರ ಸಾಬೀತುಪಡಿಸಲಿ ಎಂದು ಆರ್.ಅಶೋಕ್ ಸವಾಲೆಸೆದರು.
ಅನುದಾನವಿಲ್ಲದೆ ಅಭಿವೃದ್ಧಿ ಕುಂಠಿತವಾಗಿರುವ ಕಾರಣ ಆಡಳಿತ ಪಕ್ಷದ ಶಾಸಕರೇ ಬೇಸತ್ತಿದ್ದು, ಶಾಸಕ ರಾಜು ಕಾಗೆ ಮಾತುಗಳೇ ಸಾಕ್ಷಿಯಾಗಿವೆ. ಪ್ರತಿಪಕ್ಷ ಶಾಸಕರು ಪ್ರತಿನಿಧಿಸಿರುವ ಕ್ಷೇತ್ರಗಳಿಗೆ ನಯಾ ಪೈಸೆ ನೀಡಿಲ್ಲವೆಂದು ಟೀಕಿಸಿದರು.
ರಾಜ್ಯ ಸರ್ಕಾರದ ಅನ್ಯಾಯ, ಪ್ರತಿಪಕ್ಷಗಳ ಶಾಸಕರಿಗೆ ತಾರತಮ್ಯ ಮಾಡುತ್ತಿರುವುದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲು ಆಲೋಚಿಸುತ್ತಿದ್ದೇವೆ. ಪಕ್ಷದ ಶಾಸಕರೊಂದಿಗೆ ಚರ್ಚಿಸಿ ವಿಧಾನಸೌಧ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಯಾವುದೇ ತಾರತಮ್ಯವಾಗಿಲ್ಲ ಎಂಬುದನ್ನು ಈ ಹಿಂದೆಯೇ ಅಂಕಿ-ಅಂಶ ಸಹಿತ ರುಜುವಾತುಪಡಿಸಿದ್ದೇವೆ. ಮೆಟ್ರೋ, ಹೆದ್ದಾರಿ, ರೈಲು ಮಾರ್ಗ, ಬೆಂಗಳೂರು ಅಭಿವೃದ್ಧಿಗೆ ನೀಡಿದ ಅನುದಾನ ಬಗ್ಗೆ ರಾಜ್ಯ ಸರ್ಕಾರ ಲೆಕ್ಕ ಕೊಡುತ್ತಿಲ್ಲವೆಂದು ಆರ್.ಅಶೋಕ್ ವಾಗ್ದಾಳಿ ಮಾಡಿದರು.