ನ್ಯೂಸ್

ಅಸ್ಥಿರತೆಗೆ ಕಾಂಗ್ರೆಸ್ ಹೆಸರುವಾಸಿ; ಕರ್ನಾಟಕ ಸರ್ಕಾರ ಉಲ್ಲೇಖಿಸಿ ಪ್ರಧಾನಿ ಮೋದಿ ವಾಗ್ದಾಳಿ

ಸೋನಿಪತ್: ಹರಿಯಾಣದ ಗೊಹಾನಾದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ಅಸ್ಥಿರತೆಗೆ ಹೆಸರುವಾಸಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಅದು ಎಲ್ಲೆಲ್ಲಿ ಸರ್ಕಾರಗಳನ್ನು ರಚಿಸಿದೆಯೋ ಅಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ಆಂತರಿಕ ಕಚ್ಚಾಟದಲ್ಲಿ ತೊಡಗಿದ್ದಾರೆ. ಅವರಿಗೆ ಜನರ ನೋವು ಮತ್ತು ಸಮಸ್ಯೆಗಳು ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್ ಆಡಳಿತದ ಕರ್ನಾಟಕದ ಉದಾಹರಣೆಯನ್ನು ಉಲ್ಲೇಖಿಸಿದರು.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆಂತರಿಕ ಜಗಳದಲ್ಲಿ ನಿರತರಾಗಿದ್ದಾರೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದೇ ಸ್ಥಿತಿ ಇದೆ. ಈ ಮೊದಲು ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಆಂತರಿಕ ಕಚ್ಚಾಟ ತೀವ್ರವಾಗಿತ್ತು. ಹೀಗಾಗಿ ಮತದಾರರು ಹುಷಾರಾಗಿರಬೇಕು. ಅಪ್ಪಿತಪ್ಪಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಒಳಜಗಳದಿಂದ ರಾಜ್ಯವನ್ನು ಹಾಳು ಮಾಡಲಿದೆ ಎಂದು ಅವರು ಎಚ್ಚರಿಸಿದರು.

ಕಾಂಗ್ರೆಸ್​ಗೆ ಮತ ಹಾಕುವುದು ಎಂದರೆ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಪಣಕ್ಕಿಡುವುದು. ವಿನಾಶದ ಬಾಗಿಲು ತೆರೆಯುವುದು. ಅಸ್ಥಿರತೆಯು ಪ್ರತಿಯೊಂದು ಕೆಲಸವನ್ನೂ ನಿಲ್ಲಿಸುತ್ತದೆ. ಹೂಡಿಕೆ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಅಧಿಕಾರದಿಂದ ದೂರವಿದ್ದ ಸಮಯದಲ್ಲಿ ಬಡವರು, ಎಸ್​ಸಿ, ಎಸ್​ಟಿ ಮತ್ತು ಒಬಿಸಿಗಳು ತಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಲಿತರ ಮತ್ತು ಹಿಂದುಳಿದವರ ಹಕ್ಕುಗಳನ್ನು ಕಸಿದುಕೊಂಡಿದೆ. ಕಾಂಗ್ರೆಸ್​ನಿಂದ ಯಾರೇ ಪ್ರಧಾನಿಯಾದರೂ ಅವರು ಮೀಸಲಾತಿಯನ್ನು ವಿರೋಧಿಸುತ್ತಾರೆ. ಮೀಸಲಾತಿಯನ್ನು ವಿರೋಧಿಸುವುದು ಮತ್ತು ದ್ವೇಷಿಸುವುದು ಕಾಂಗ್ರೆಸ್ ಡಿಎನ್​ಎನಲ್ಲಿದೆ. ಕಾಂಗ್ರೆಸ್​ನ ಮೀಸಲಾತಿ ವಿರೋಧಿ ತಂತ್ರಗಳ ಬಗ್ಗೆ ಜನರು ಎಚ್ಚರದಿಂದಿರಬೇಕು.

ಬಿಜೆಪಿಯು ದಲಿತ, ಒಬಿಸಿ ಮತ್ತು ಬುಡಕಟ್ಟು ಜನಾಂಗದವರಿಗೆ ನಿಜವಾದ ಅರ್ಥದಲ್ಲಿ ಅಧಿಕಾರ ನೀಡಿದೆ. ವಂಚಿತ ಮತ್ತು ಹಿಂದುಳಿದ ವರ್ಗಗಳನ್ನು ಮುನ್ನಡೆಸಿದೆ. ಇಂದು ವಿಶ್ವದ ಅತಿದೊಡ್ಡ ಕಂಪನಿಗಳು ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಆಸಕ್ತಿ ಹೊಂದಿವೆ. ಅದರ ದೊಡ್ಡ ಲಾಭವು ಬಡವರು, ರೈತರು ಮತ್ತು ದಲಿತರಿಗೆ ಹೋಗುತ್ತದೆ ಎಂದು ಅವರು ಹೇಳಿದರು.

ಮುಡಾ ಪ್ರಸ್ತಾಪ ಸಿಎಂ ವಿರುದ್ಧ ಟೀಕೆ

ಕರ್ನಾಟಕ ಸಿಎಂ ಭೂ ಹಗರಣದ ಆರೋಪಿಯಾಗಿದ್ದಾರೆ. ಅವರ ವಿರುದ್ಧ ತನಿಖೆಗೆ ಶಿಫಾರಸು ಮಾಡಿರುವುದು ಸರಿಯಾಗಿದ್ದು, ವಿಚಾರಣೆ ನಡೆಯಲಿ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ದಲಿತರಿಗೆ ಕಾಯ್ದಿರಿಸಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪವೂ ಕಾಂಗ್ರೆಸ್ ಮೇಲೆ ಇದೆ. ಇಡೀ ದೇಶದಲ್ಲಿ ಕಾಂಗ್ರೆಸ್​ಗಿಂತ ಭ್ರಷ್ಟ ಪಕ್ಷ ಬೇರೊಂದಿಲ್ಲ ಎಂದು ಪ್ರಧಾನಿ ಮೋದಿ ಟೀಕೆ ಮಾಡಿದರು.

ಜನರ ಮೇಲೆ ಜಿಎಸ್​ಟಿ, ನೋಟು ಬ್ಯಾನ್ ಅಸ್ತ್ರ

ಜಮ್ಮು: ಅದಾನಿ ಅದಾನಿ ಮತ್ತು ಅಂಬಾನಿಯಂತಹ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಜಿಎಸ್​ಟಿ ಮತ್ತು ನೋಟು ಅಮಾನ್ಯೀಕರಣ ಅಸ್ತ್ರಗಳನ್ನು ಬಳಸಿದೆ. ಮೇಕ್ ಇನ್ ಇಂಡಿಯಾ ಯೋಜನೆ ಕೂಡ ಕೆಲ ಉದ್ಯಮಿಗಳಿಗೆ ಮಾತ್ರ ಲಾಭದಾಯಕವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಜಮ್ಮು ಜಿಲ್ಲೆಯಲ್ಲಿ ಕಾಂಗ್ರೆಸ್- ನ್ಯಾಷನಲ್ ಕಾನ್ಪರೆನ್ಸ್ (ಎನ್​ಸಿ) ಮೈತ್ರಿ ಕೂಟದ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಕೇಂದ್ರೀಯ ಸಂಸ್ಥೆಗಳಾದ ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮೇಕ್ ಇನ್ ಇಂಡಿಯಾ ಮತ್ತು ರಕ್ಷಣಾ ಉದ್ಯಮದಲ್ಲಿ ಎಲ್ಲಾ ಒಪ್ಪಂದಗಳು ಅದಾನಿಗಳಂತಹವರಿಗೆ ಹೋಗುತ್ತಿವೆ. ಇಸ್ರೇಲಿ ಕಂಪನಿ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಅದಾನಿ ತನ್ನ ಲೇಬಲ್ ಅನ್ನು ಇದಕ್ಕೆ ಅಂಟಿಸುತ್ತಿದೆ. ಇದನ್ನು ಮೇಡ್ ಇನ್ ಇಂಡಿಯಾ ಎಂದು ಬಿಂಬಿಸಲಾಗುತ್ತಿದೆ.

ಕೇಂದ್ರ ಸರ್ಕಾರ ಕೇವಲ ಅದಾನಿ, ಅಂಬಾನಿಯಂತಹ ಕೋಟ್ಯಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದರು. ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳು, ರಕ್ಷಣಾ ಶಸ್ತ್ರಾಸ್ತ್ರಗಳು, ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಉತ್ಪಾದನೆಯಾಗುವ ಸೇಬು ಕೂಡ ಅದಾನಿ ನಿಯಂತ್ರಣದಲ್ಲಿದೆ. ವಿಮಾನ ನಿಲ್ದಾಣಗಳ ಮೇಲೆ ಅದಾನಿ ತೆರಿಗೆ ಮತ್ತು ಮೊಬೈಲ್ ಮೇಲೆ ಅಂಬಾನಿ ತೆರಿಗೆ ಇದೆ. ವಿಮಾನ ನಿಲ್ದಾಣವನ್ನು ಬೇರೊಬ್ಬರು ನಡೆಸುತ್ತಿದ್ದರೆ ಸರ್ಕಾರವು ಸಿಬಿಐ ಮತ್ತು ಇಡಿಯನ್ನು ಬಳಸಿ ಅದಾನಿಗೆ ಸೌಲಭ್ಯವನ್ನು ಹಸ್ತಾಂತರಿ ಸಲು ಯತ್ನಿಸುತ್ತದೆ ಎಂದು ವಾಗ್ದಾಳಿ ಮಾಡಿದರು.

2ನೇ ಹಂತದಲ್ಲಿ ಶೇ. 56 ಮತದಾನ

ಜಮ್ಮು-ಕಾಶ್ಮೀರದಲ್ಲಿ 26 ಸ್ಥಾನಗಳಿಗೆ ನಡೆದ 2ನೇ ಹಂತದ ಚುನಾವಣೆಯಲ್ಲಿ ಸಂಜೆವರೆಗೆ ಶೇ. 56 ಮತದಾನವಾಗಿದೆ. ಎಲ್ಲ ಕಡೆ ಮತದಾನ ಶಾಂತಿಯುತ ವಾಗಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲ ಕಡೆಗಳಲ್ಲಿ ಸಣ್ಣ ಘಟನೆಗಳು ನಡೆದಿವೆ. ಎಲ್ಲಿಯೂ ಮರು ಮತದಾನದ ಅಗತ್ಯವಿಲ್ಲ. 16 ಸದಸ್ಯರ ವಿದೇಶಿ ರಾಯಭಾರಿಗಳ ನಿಯೋಗವು ಚುನಾವಣೆಯನ್ನು ವೀಕ್ಷಿಸಲು ಕಾಶ್ಮೀರಕ್ಕೆ ಭೇಟಿ ನೀಡಿತ್ತು.