ಶೃಂಗೇರಿ: ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುತ್ತಿದ್ದು, ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದೆಲ್ಲೆಡೆ ಜಾರಿಗೊಳಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಗೌರಿಶಂಕರ್ ಸಭಾಂಗಣದಲ್ಲಿ ಬುಧವಾರ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ್ದು, ಈ ಸೌಲಭ್ಯವನ್ನು ಮಹಿಳೆಯರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.
ವಿರೋಧ ಪಕ್ಷಗಳು ಕಾಂಗ್ರೆಸ್ ಯೋಜನೆ ಸ್ಥಗಿತಗೊಳಿಸುತ್ತದೆ ಎಂಬ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಈಗಾಗಲೇ ನಾಲ್ಕು ಯೋಜನೆ ಜಾರಿಗೊಳಿಸಿದ್ದು, ನಿರುದ್ಯೋಗಿ ಪದವಿಧರರಿಗೆ ಮೂರು ಸಾವಿರ ರೂ. ನೀಡುವ ಯುವ ನಿಧಿ ಯೋಜನೆಯೂ ಶೀಘ್ರದಲ್ಲಿ ಜಾರಿಯಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಮುಖಂಡರಾದ ಸೌಮ್ಯ ವಿಜಯಕುಮಾರ್, ತ್ರಿವೇಣಿ, ಪಪಂ ಮುಖ್ಯಾಧಿಕಾರಿ ಶ್ರೀಪಾದರಾವ್, ಕುಪ್ಪೆರಾವ್ ಮೂರಮನಿ ಇದ್ದರು.