ನ್ಯೂಸ್

ಕೇರಳ 'ಚಿನ್ನ'ದ ಹಗರಣದ ತನಿಖೆಯಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಲಿ...: ಕಾಂಗ್ರೆಸ್ ಮುಖಂಡನ ಒತ್ತಾಯ

https://www.vijayavani.net/goldwoman-ias-officer-dismiss/ತಿರುವನಂತಪುರಂ: ಇಲ್ಲಿನ ವಿಮಾನ ನಿಲ್ದಾಣದಲ್ಲಿ, ರಾಜತಾಂತ್ರಿಕ ಡಿಪ್ಲೊಮೆಟಿಕ್ ಬ್ಯಾಗೇಜ್​ನಲ್ಲಿ ನಿನ್ನೆ ಸಿಕ್ಕಿರುವ 15 ಕೋಟಿ ರೂ.ಮೌಲ್ಯದ 30 ಕೆ.ಜಿ. ತೂಕದ ಚಿನ್ನದ ಪ್ರಕರಣ ಪ್ರತಿದಿನ ತಿರುವು ಪಡೆಯುತ್ತಿದೆ.

ತಿರುವನಂತಪುರದ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲೇಟ್‌ನಲ್ಲಿ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದ ಸ್ವಪ್ನಾ ಸುರೇಶ್​ ಅವರ ಹೆಸರು ಈ ಚಿನ್ನ ಕಳ್ಳಸಾಗಣೆಯಲ್ಲಿ ಕೇಳಿಬರುತ್ತಿದೆ. ಹಾಗೇ ಸ್ವಪ್ನಾ ಸುರೇಶ್​ ಜತೆ ಐಎಎಸ್‌ ಅಧಿಕಾರಿ ಎಂ.ಶಿವಶಂಕರ್ ಅವರನ್ನು ಅಮಾನತು ಕೂಡ ಮಾಡಲಾಗಿದೆ. ಎಂ.ಶಿವಶಂಕರ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಆಪ್ತ ಕಾರ್ಯದರ್ಶಿಯೂ ಆಗಿದ್ದವರು. ಹೀಗಾಗಿ ಸಿಎಂ ಹೆಸರೂ ಕೂಡ ಇದರಲ್ಲಿ ಕೇಳಿಬರುತ್ತಿದೆ.

ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕಾಂಗ್ರೆಸ್​ ಮುಖಂಡ ರಮೇಶ್​ ಚೆನ್ನಿತಾಲ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಗಂಭೀರ ಸ್ವರೂಪ ಪಡೆಯುತ್ತಿರುವ ಚಿನ್ನದ ಕಳ್ಳ ಸಾಗಣೆ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಕಚೇರಿಯ ಪಾತ್ರವೂ ಇದೆ ಎಂಬ ಮಾತು ಕೇಳಿಬರುತ್ತಿದೆ. ಇದು ಎಷ್ಟರಮಟ್ಟಿಗೆ ಸತ್ಯ, ಮುಖ್ಯಮಂತ್ರಿ ಕಚೇರಿ ಪಾತ್ರ ಏನೆಂಬುದನ್ನು ತನಿಖೆ ನಡೆಯಬೇಕು ಎಂದಿದ್ದಾರೆ.

ರಾಷ್ಟ್ರದ ಭದ್ರತೆ, ನಮ್ಮ ದೇಶ ಹಾಗೂ ಯುಎಇ ನಡುವಿನ ಸ್ನೇಹ ಸಂಬಂಧವನ್ನು ಹಾಗೇ ಉಳಿಸಿಕೊಳ್ಳುವ ದೃಷ್ಟಿಯಿಂದ ಚಿನ್ನದ ಹಗರಣದ ತನಿಖೆಯನ್ನು ಸಿಬಿಐನಂತಹ ಸಂಸ್ಥೆಗೆ ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಗಮನಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಗರಣದಲ್ಲಿ ಎಲ್ಲ ದೊಡ್ಡ ಜನರ ಹೆಸರೇ ಕೇಳಿಬರುತ್ತಿದ್ದು, ಆದಷ್ಟು ಬೇಗ ವಾಸ್ತವ ಗೊತ್ತಾಗಬೇಕು ಎಂದಿದ್ದಾರೆ. (ಏಜೆನ್ಸೀಸ್​)