ನ್ಯೂಸ್

ದೇಶ ವಿಭಜನೆಯ ದುರಂತದ ಕಹಿಸತ್ಯ ಮರೆಮಾಚಿದ ಕಾಂಗ್ರೆಸ್

ಮೃತ್ಯುಂಜಯ ಕಪಗಲ್

ಬೆಂಗಳೂರು: ಅಧಿಕಾರದ ಆಸೆಗೆ ಕಾಂಗ್ರೆಸ್ ಈಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಬೇರೆ ದೇಶಗಳಿಗೆ ಹೋಗಿ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲವೆಂದು ಹೇಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಬೆಂಗಳೂರಿನ ಬಸವನಗುಡಿಯ ಖಾಸಗಿ ಸಭಾಂಗಣದಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಸೋಮವಾರ ಏರ್ಪಡಿಸಿದ್ದ ‘ಭಾರತ ವಿಭಜನೆ ಒಂದು ದುರಂತ ಕಥೆ’ ನೆನಪಿಸುವ ಪ್ರದರ್ಶಿನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದಲ್ಲೇ ಅಲ್ಪಸಂಖ್ಯಾತರು ಅತ್ಯಂತ ಸುರಕ್ಷಿತವಾಗಿದ್ದಾರೆ. ದೇಶ ವಿಭಜನೆಯ ಕಹಿಸತ್ಯಗಳನ್ನು ಕಾಂಗ್ರೆಸ್‌ನವರು ಮರೆಮಾಚಿದರು. ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಂತಹ ಕೆಟ್ಟ ಸಂದರ್ಭ ಯಾವ ದೇಶಕ್ಕೂ ಬಂದಿಲ್ಲವೆಂದರು.

ಸ್ವಾತಂತ್ರ್ಯ ಚಳವಳಿ ಮೂಲ ನಮ್ಮ ದೇಶದ ಅಂತಃಸತ್ವ. ಕಾಂಗ್ರೆಸ್ ಹುಟ್ಟುವ ಮೊದಲೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ ಮುಂತಾದವರು ಹೋರಾಡಿದ್ದಾರೆ.

ಈಗಿನ ಇತಿಹಾಸದಲ್ಲಿ ಇವರು ಯಾರೂ ಕಾಣುವುದಿಲ್ಲ. ಗಾಂಧಿ, ನೆಹರು ಹಾಗೂ ಅವರ ಹಿಂಬಾಲಕರು ಮಾತ್ರ ಇದ್ದಾರೆ. ಬಾಲಗಂಗಾಧರ ತಿಲಕ ಕಾಂಗ್ರೆಸ್‌ಗೆ ಮಾರ್ಗದರ್ಶಕರು, ಸುಭಾಷಚಂದ್ರ ಬೋಸ್ ಕಾಂಗ್ರೆಸ್‌ನಿಂದ ಹೊರ ಬಂದು ಹೋರಾಟ ನಡೆಸಿದರು ಎಂದು ಬೊಮ್ಮಾಯಿ ನೆನಪಿಸಿಕೊಂಡರು.

ಅಖಂಡ ಭಾರತಕ್ಕೆ ಪಣ

ಭಾರತ ಅಂದರೆ ಕೇವಲ ಭೌಗೋಳಿಕ ದೇಶವಲ್ಲ, ಭಾವನಾತ್ಮಕ ದೇಶ. ನಮ್ಮನ್ನು ವಿರೋಧಿಸುವ ದೇಶಗಳು ಕೂಡ ನರೇಂದ್ರ ಮೋದಿಯವರ ನಾಯಕತ್ವ ಕೊಂಡಾಡುತ್ತಿವೆ. ಮೋದಿಯವರು ಭಾರತ ಮತ್ತೆ ಅಖಂಡವಾಗಲು ಶ್ರಮಿಸುತ್ತಿದ್ದು, ಎಲ್ಲರೂ ಕೈಜೋಡಿಸುವ ಪಣ ತೊಡಬೇಕಾಗಿದೆ ಎಂದರು.

ಕಾಂಗ್ರೆಸ್ ನಾಯಕರು ಭಾರತ ಮಾತೆ ಹತ್ಯೆ ಎಂದು ಹೇಳಿದ್ದಾರೆ. ಭಾರತ ಮಾತೆಯ ಹತ್ಯೆ ಪರಿಕಲ್ಪನೆ ಹೇಯವಾದದ್ದು. ಭಾರತ ಮಾತೆ ನಿರಂತರ. ಸೂರ್ಯ, ಚಂದ್ರ ಇರುವವರೆಗೂ ಇರುತ್ತಾಳೆ ಎಂದು ಬೊಮ್ಮಾಯಿ ಹೇಳಿದರು.