ನವದೆಹಲಿ: ಇಂಡಿಯಾ ಮೈತ್ರಿಕೂಟ ಗುಂಪಿನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಹೊಂದಿರುವುದರಿಂದ ಲೋಕಸಭೆ ವಿರೋಧ ಪಕ್ಷದ ನಾಯಕನ (ಎಲ್‌ಒಪಿ) ಆಯ್ಕೆ ಕುರಿತು ಕಾಂಗ್ರೆಸ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಎನ್ಸಿಪಿ ( ಎಸ್ಪಿ) ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಹಸಗೂಸನ್ನು ತೋಟದಲ್ಲಿ ಎಸೆದು ಹೋದ ತಾಯಿ!
ಜೂನ್ 24ರಿಂದ ಪ್ರಾರಂಭವಾಗುವ ಲೋಕಸಭೆ ಅಧಿವೇಶನಕ್ಕೆ ಮೊದಲು, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಭೆ ನಡೆಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುತ್ತಾರೆ. ನಾವು ನಿರ್ಧಾರವನ್ನು ಅನುಮೋದಿಸುತ್ತೇವೆ ಎಂದು ಇಂಡಿಯಾ ಬಣದ ಪಾಲುದಾರ ಶರದ್ ಪವರ್ ತಿಳಿಸಿದ್ದಾರೆ.
ಲೋಕಸಭೆಯ ಡೆಪ್ಯುಟಿ ಸ್ಪೀಕರ್ ಹುದ್ದೆಯು ವಿರೋಧ ಪಕ್ಷಗಳ ಪಾಲಾಗುವ ಸಾಧ್ಯತೆ ಕಡಿಮೆ ಇದೆ ಎಂದ ಅವರು, 'ಕಳೆದ ಬಾರಿ, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವ ಭರವಸೆಯನ್ನು ಈಡೇರಿಸಲಿಲ್ಲ. ಮೋದಿ ಅವರು ಈ ಬಾರಿಯೂ ಇದನ್ನು ಒಪ್ಪದ ಕಾರಣ ಅದು ಈಡೇರುವ ಬಗ್ಗೆ ನನಗೆ ಅನುಮಾನವಿದೆ. ಆದರೂ ನಾವು ಆ ಬಗ್ಗೆ ಚರ್ಚಿಸಲಿದ್ದೇವೆ' ಎಂದು ಹೇಳಿದರು.
ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಮೂರು ಅವಧಿಯ ಕೇಂದ್ರ ಸಚಿವರಾಗಿದ್ದ ಪವಾರ್, ಲೋಕಸಭೆಯ ಉಪ ಸಭಾಪತಿ ಹುದ್ದೆಯು ವಿರೋಧ ಪಕ್ಷಗಳಿಗೆ ಸಿಗುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮುಂದೆ ನಡೆಯಲಿರುವ ಚುನಾವಣೆಯನ್ನು ಗೆಲ್ಲಲು ವಿಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸಜ್ಜಾಗಿದೆ. ಲೋಕಸಭಾ ಚುನಾವಣೆಯಲ್ಲಿ, ಎಂವಿಎ ಮಿತ್ರಪಕ್ಷಗಳು ಒಟ್ಟು 48 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಗೆದ್ದಿವೆ. ಈ ಫಲಿತಾಂಶವನ್ನು ಗಮನಿಸಿದರೆ ನಾವು 155ಕ್ಕೂ ಹೆಚ್ಚು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ' ಎಂದು ಅವರು ಪವಾರ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ರಾಹುಲ್ ಗಾಂಧಿ ನಿಭಾಯಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಾರಿ ಅತಿದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ನಾಯಕನಿಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದ್ದು, ವಿರೋಧ ಪಕ್ಷದ ನಾಯಕರಾಗಲು, ಅತಿದೊಡ್ಡ ವಿರೋಧ ಪಕ್ಷವು ಒಟ್ಟು ಸ್ಥಾನಗಳಲ್ಲಿ ಕನಿಷ್ಠ 10% ಅಂದರೆ 55 ಸ್ಥಾನಗಳನ್ನು ಹೊಂದಿರಬೇಕು. ಇದೀಗ ಈ ಹುದ್ದೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗುತ್ತಿದ್ದು, ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಧ್ವನಿಯೂ ಪಕ್ಷದೊಳಗಿನಿಂದಲೇ ಕೇಳಿ ಬರುತ್ತಿದೆ.