ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಅಭಿವೃದ್ಧಿ ಕುಂಠಿತಗೊಂಡಿದ್ದು, ಸಾಲದ ಹೊರೆ ಏರುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಗಿರಿಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಹೊರಟಿದೆ. ಪತಿ ಮಟ್ಕಾ ಚಟುವಟಿಕೆಗಳಿಗೆ ಪ್ರತಿ ತಿಂಗಳು ಪೊಲೀಸ್ ಇಲಾಖೆಗೆ 4.5 ಲಕ್ಷ ರೂ. ಹಫ್ತಾ ನೀಡುತ್ತಿದ್ದರು. ಈ ಬಾರಿ ನೀಡದ ಕಾರಣ ಈ ಕೃತ್ಯ ನಡೆದಿದೆ ಎನ್ನುವ ವಿಚಾರವನ್ನು ಪತ್ನಿಯೇ ಹೇಳಿಕೊಂಡಿದ್ದಾರೆ. ಪ್ರತಿಪಕ್ಷಗಳು ಗಾಳಿಯಲ್ಲಿ ಗುಂಡು ಹಾರಿಸುತ್ತಿವೆ ಎಂಬುದಾಗಿ ಗೃಹ ಸಚಿವರು ಲು ಹೇಳಿಕೆ ನೀಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎಂದು ಪ್ರಶ್ನಿಸಿದರು.
ದುಡ್ಡು ಮಾಡುವ ಉದ್ದೇಶದಿಂದ ಸೆಕ್ಯುರಿಟಿ ಏಜೆನ್ಸಿ ಮೂಲಕ ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ರಾಜ್ಯ ಸರ್ಕಾರ ಹೊರಟಿದೆ. ಹೀಗಾದರೆ, ಸರ್ಕಾರ ಏಕಿರಬೇಕು? ಶಿಕ್ಷಣ ಸಚಿವರ ಅಗತ್ಯವೇನಿದೆ? ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಯೋಚಿಸದೆ ಅದರಲ್ಲೂ ಎಷ್ಟು ಹಣ ದೋಚಬಹುದು ಎಂಬುದರ ಬಗ್ಗೆ ಚಿಂತಿಸುತ್ತಿದೆ ಎಂದು ಹರಿಹಾಯ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 187 ಕೋಟಿ ರೂ. ದುರ್ಬಳಕೆಯಾಗಿದ್ದು, ಡೆತ್ನೋಟ್ನಲ್ಲಿ ಸಚಿವರ ಮೌಖಿಕ ಆದೇಶದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದು ಸರ್ಕಾರದ ಭ್ರಷ್ಟಾಚಾರಕ್ಕೆ ಸಾ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಅವರನ್ನು ದೇವೇಗೌಡರೇ ವಿದೇಶಕ್ಕೆ ಕಳುಹಿಸಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದು, ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರ ಪುತ್ರ ಅಲ್ಲೆಲ್ಲೋ ಹೋಗಿ ಮೃತಪಟ್ಟಿದ್ದರ ಬಗ್ಗೆ ತನಿಖೆ ನಡೆಸಿದರೆ ಆ ಬಗ್ಗೆ ನಾವೇನು ಒತ್ತಾಯಿಸಿದ್ದೇವೆಯೇ? ಆತ ಹೋಗಿದ್ದೆಲ್ಲಿಗೆ? ಯಾವ ಕಾರ್ಯಕ್ರಮ? ಆತನನ್ನು ಕರೆದುಕೊಂಡು ಹೋದವರು ಸಾಧುಗಳೇ ಎಂದು ಪ್ರಶ್ನಿಸಿದರು.