ಬೆಂಗಳೂರು: ರಾಜ್ಯದಲ್ಲಿ ಭಯೋತ್ಪಾದಕರು, ಮತಾಂಧರು, ಗೂಂಡಾಗಳಿಗೆ ಕಾಂಗ್ರೆಸ್ ರಕ್ಷಣೆ ಗ್ಯಾರಂಟಿ ನೀಡಿ, ರಾಜ್ಯದ ಜನರ ನೆಮ್ಮದಿ ಹಾಗೂ ಬದುಕುವ ಗ್ಯಾರಂಟಿಯನ್ನು ಕಿತ್ತುಕೊಂಡಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ಮಾಡಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ, ಮತಾಂಧ ಶಕ್ತಿಯನ್ನು ಬೆಳೆಸುವ ಕೆಲಸ ಸರ್ಕಾರ ಮಾಡುತ್ತಿದೆ. ಗೂಂಡಾಗಳು ಆಡಳಿತದ ಭಾಗವಾಗಿರುವುದು ಸ್ಪಷ್ಟವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಾಡನ್ನು ಮತಾಂಧರ ಯುದ್ಧಭೂಮಿಯನ್ನಾಗಿ ಪರಿವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮತಾಂಧರು, ಗೂಂಡಾಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮವಹಿಸಿಲ್ಲ. ಮಹಿಳೆಯರು, ಜನರು ಹೊರ ಬಾರದಂತೆ ಭಯ-ಭೀತಿ ಸೃಷ್ಟಿಸಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಹುನ್ನಾರ ಹೂಡಿದೆ. ಆದರೆ ರಾಜ್ಯದಲ್ಲಿ ಮೋದಿಯವರ ವಾತಾವರಣವಿದ್ದು, ಎನ್ ಡಿಎ 28 ಸ್ಥಾನಗಳನ್ನು ಗೆಲ್ಲುವುದು ತಪ್ಪಿಸಲಾಗದು ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರದ ಬಲದಿಂದ ಸುಳ್ಳು ಜಾಹೀರಾತು ನೀಡಿ ಜನರ ದಿಕ್ಕು ತಪ್ಪಿಸುವ ಭ್ರಮೆಯಲ್ಲಿದೆ. ಕಳೆದ 11 ತಿಂಗಳಲ್ಲಿ 700ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರೂ ಕಿಸಾನ್ ಸಮ್ಮಾನ್ ನಿಧಿ ನಿಲ್ಸಿದ್ದಾರೆ. ಇದೊಂದು ಕ್ರೂರ ಮತ್ತು ಕಲ್ಲು ಬಂಡೆಯಂಥ ಸರ್ಕಾರ. ಆರ್ಥಿಕವಾಗಿ ದಿವಾಳಿಯಾಗಿದೆ, ಅಭಿವೃದ್ಧಿ ಶೂನ್ಯ, ನೀರಾವರಿ ಕೆಲಸಗಳು ಸ್ಥಗಿತ ವಾಗಿದೆ. ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪ ಗುಡುಗಿದರು.