ನ್ಯೂಸ್

ಕಾಂಗ್ರೆಸ್ ಸರ್ಕಾರದ ಲಂಚಾವತಾರ ಬಯಲು: ಆರ್.ಅಶೋಕ್ ಟೀಕೆ

ಬೆಂಗಳೂರು: ಕಾರ್ಯಾದೇಶ ನೀಡಲು 60 ಪರ್ಸೆಂಟ್ ಲಂಚ ಕೇಳಿದ್ದರ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಏ.22ರಂದು ಖಾಸಗಿ ಕಂಪನಿಯೊಂದು ಪತ್ರ ಬರೆದು ದೂರಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಲಂಚಾವತಾರದ ಮುಖವಾಡ ಬಯಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಸರ್ಕಾರವೆಂದು ಸುಳ್ಳು, ಅಪಪ್ರಚಾರದ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದು, 60 ಪರ್ಸೆಂಟ್ ಲಂಚ ಹೊಡೆದು ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯ ಮದ್ಯ ಮಾರಾಟಗಾರರ ಸಂಘ ಬರೆದಿರುವ ಪತ್ರದಲ್ಲಿ 700 ಕೋಟಿ ರೂ. ಲಂಚದ ಬಗ್ಗೆ ಆರೋಪ ಮಾಡಿದ್ದಾರೆ. ಈಗ ಖಾಸಗಿ ಕಂಪನಿಯೊಂದು 60 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.

ದಿನ ಬೆಳಗಾದರೆ ಒಂದು ಹೊಸ ಹಗರಣದ ಕಥೆ ಕೇಳಿ ಕೇಳಿ ಕನ್ನಡಿಗರು ರೋಸಿ ಹೋಗಿದ್ದಾರೆ. ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. ರಾಜೀನಾಮೆ ಕೊಟ್ಟು ಇರುವ ಅಲ್ಪಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಆರ್.ಅಶೋಕ್ ಕುಟುಕಿದ್ದಾರೆ.