ನ್ಯೂಸ್

ನಂದಿನಿ ಹಾಲಿನ ದರ ಉಕ್ಕಿಸಲು ಕಾಂಗ್ರೆಸ್ ಸರ್ಕಾರ ಮುಂದು: ಪ್ರತಿಪಕ್ಷ ಬಿಜೆಪಿ ಆಕ್ರೋಶ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ತಣ್ಣಗಾಗುವ ಮುನ್ನವೇ ಗ್ರಾಹಕರ ಕೈಗೆ ಕೆಎಂಎಫ್ ನಂದಿನಿ ಹಾಲು ದರ ಏರಿಕೆಯ ಬರೆ ಬಿದ್ದಿದೆ. ಪ್ರತಿ ಲೀಟರ್ ಗೆ ಸರಾಸರಿ ಎರಡು ರೂ. ಏರಿಕೆ ಮಾಡಿದ್ದು, ಜೂ.26ರಿಂದ ಜಾರಿಗೊಳಿಸಲು ಕೆಎಂಎಫ್ ನಿರ್ಧರಿಸಿದೆ. ಹಾಲಿನ ಬೆಲೆ ಹೆಚ್ಚಳಕ್ಕೆ ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ‌‌.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ‌.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಾಮಾಜಿಕ ಜಾಲ ತಾಣದ ತಮ್ಮ ಖಾತೆಯಲ್ಲಿ ಸಂದೇಶ ಹಂಚಿಕೊಂಡು, ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಬೆಲೆ ಏರಿಕೆಗೆ ನಿಸ್ಸೀಮ

ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಇತ್ತ ಬಡವರಿಗೂ ಉಪಕಾರಿಯಾಗಲ್ಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ 10 ಪೈಸೆ ಹೆಚ್ಚಳ ಮಾಡಲಾಗಿದೆ.

ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

ವಿಕೃತ ಸಂತೋಷ

ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕರ್ನಾಟಕ ಕಾಂಗ್ರೆಸ್  ಸರ್ಕಾರ ನಂದಿನಿ ಹಾಲಿನ ದರವನ್ನ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಅಣಕವಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್ ನಲ್ಲಿ  3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮ್ಮೆ 2 ರೂಪಾಯಿ ಹೆಚ್ಚಾಗಿದೆ.  ರಾಜ್ಯದ ಬಡವರು, ಮಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ.

ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಬೇಕು ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.