ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷ (2023-24)ವೇ ಶೋಷಿತ ದೋಖಾ ಮಾಡಿದೆ. ಪರಿಶಿಷ್ಟ ಜಾತಿ- ವರ್ಗಗಳಿಗೆ ದೋಖಾ ಮಾಡುವುದನ್ನು ಎರಡನೇ ವರ್ಷವೂ ಮುಂದುವರಿಸಿದೆ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಮತಬೇಟೆಯಲ್ಲಿ, ಗ್ಯಾರಂಟಿಗಳ ಆಶ್ವಾಸನೆ ಕೊಟ್ಟಿತ್ತು. ಅದನ್ನು ಈಡೇರಿಸಲು ಅವರಲ್ಲಿ ಹಣ ಇರಲಿಲ್ಲ. ಗ್ಯಾರಂಟಿಗೆ ಬೇಕಾದ ಕೊರತೆ ಹಣವನ್ನು ತುಂಬಿಸಲು ದಲಿತರಿಗೆ ಮೀಸಲಿಟ್ಟ 11,114 ಕೋಟಿ ರೂ. ಎಸ್‍ಸಿ ಎಸ್‍ಪಿ, ಟಿಎಸ್‍ಪಿ ಹಣವನ್ನು ತೆಗೆದು ದಲಿತರಿಗೇ ಕೊಡುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಕಿಡಿಕಾರಿದರು.
ಅದರಿಂದ ಎಸ್‍ಸಿ, ಎಸ್‍ಟಿ ಸಮುದಾಯದ ಭೂಮಿ ಖರೀದಿ, ನಿವೇಶನ ಅಥವಾ ಮನೆ ಕೊಡುವ ಕಾರ್ಯಕ್ರಮ, ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ ಮುಂತಾದ ಅನೇಕ ವಿಚಾರಗಳಿಗೆ ಇಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗ ಮಾಡಿದ್ದರು. ಇದರ ವಿರುದ್ಧ ಹೋರಾಟ ಮಾಡಿದ್ದೆವು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ 14,287 ಕೋಟಿ ರೂ. ಎಸ್‍ಸಿ ಎಸ್‍ಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ದಲಿತ ಸಮುದಾಯಗಳಿಗೆ ಬಹಳ ಅನ್ಯಾಯ ಆಗಿದೆ. ಹಣವನ್ನು ಗ್ಯಾರಂಟಿಗೆ ಕೊಟ್ಟು ನಮ್ಮನ್ನು ವಂಚನೆ ಮಾಡುತ್ತಿದ್ದಾರೆ. ದಲಿತರ ಹಣ ದಲಿತರಿಗೇ ಕೊಡುವ ಗ್ಯಾರಂಟಿಯನ್ನು ಯಾಕೆ ನೀವು ನೀಡಿಲ್ಲ ಎಂದು ಪ್ರಶ್ನಿಸಿದರು.
ಹಿಂದಿನ ವರ್ಷಕ್ಕಿಂತ 3 ಸಾವಿರ ಕೋಟಿ ಹಣ ಕೊಟ್ಟಿದ್ದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ. ನೀವು 14,287 ಕೋಟಿಯನ್ನು ಬೇರೆ ಕಡೆ ವರ್ಗಾಯಿಸಿಲ್ಲವೇ ಎಂದು ಕೇಳಿದರು. ನಮ್ಮ ಸರಕಾರವು 74 ಕೋಟಿಯನ್ನು ಗಂಗಾ ಕಲ್ಯಾಣಕ್ಕಾಗಿ ಇಟ್ಟಿತ್ತು. ಅದನ್ನೂ ಬೇರೆಯದಕ್ಕೆ ಬಳಸಿದ್ದಾರೆ. ದಲಿತರು, ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಹೆಸರು ಹೇಳಿ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ವಾಪಸ್ ಕಿತ್ತುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರಿಗೆ ಗೌರವ ಇದ್ದರೆ, ದಲಿತರ ಬಗ್ಗೆ ಕಾಳಜಿ, ವಿಶ್ವಾಸ ಇದ್ದರೆ ಈ ಹಣವನ್ನು ಮತ್ತೆ ಎಸ್‍ಸಿ ಎಸ್‍ಪಿ, ಟಿಎಸ್‍ಪಿ ಖಾತೆಗೆ ಕೊಡಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಅವರು ಅಧಿಕಾರದಿಂದ ತೊಲಗಲಿ ಎಂದು ಒತ್ತಾಯಿಸಿದರು.