ನ್ಯೂಸ್

ಕಾಂಗ್ರೆಸ್ ಸರ್ಕಾರದ ಬೆದರಿಕೆ ತಂತ್ರ: ಮಾಜಿ ಸಚಿವ ಆರಗ ಟೀಕೆ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ, ಜೆಡಿಎಸ್ ಆಡಳಿತಾವಧಿಯ ಹಗರಣಗಳ ತನಿಖೆ ನಡೆಸುತ್ತೇವೆ ಎಂಬ ಬೆದರಿಕೆ ತಂತ್ರ ಹೆಣೆದಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗುತ್ತಿದೆ. ಬಿಜೆಪಿ ಆಡಳಿತಾವಧಿ ಹಗರಣಗಳ ಪತ್ತೆ ಹಚ್ಚಿ, ತನಿಖೆಗೆ ಈ ಕಾಲಾವಕಾಶ ಸಾಲಲಿಲ್ಲವೆ ? ಎಂದು ಕೇಳಿದರು.

ಮುಡಾ ಅಕ್ರಮ ನಿವೇಶನ ಹಂಚಿಕೆ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಆರೋಪದ ಕೇಂದ್ರ ಬಿಂದುವಾಗಿದ್ದರೆ, ವಾಲ್ಮೀಕಿ ನಿಗಮದ ಹಗರಣವು ಹಣಕಾಸು ಖಾತೆ ಹೊಂದಿದ ಸಿಎಂ ವೈಲ್ಯ ಎತ್ತಿ ತೋರಿಸುತ್ತದೆ.

ಒಂದಿಲ್ಲೊಂದು ಅವ್ಯವಹಾರಗಳು ಹೊರ ಬರುತ್ತಿವೆ. ಅಭಿವೃದ್ಧಿ ಕೆಲಸ ನಿಂತಿದ್ದರೆ, ಅನುದಾನವಿಲ್ಲದೆ ಕಾಂಗ್ರೆಸ್ ಪಕ್ಷದ ಶಾಸಕರು ಬೇಸತ್ತಿದ್ದಾರೆ. ಜನರ ಗಮನಬೇರೆಡೆ ಸೆಳೆಯಲು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದು, ತನಿಖೆ ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದರು.

ವಾಲ್ಮೀಕಿ ನಿಗಮದ ಭ್ರಷ್ಟಾಚಾರದ ಬಗ್ಗೆ ಇ.ಡಿ. ದೋಷಾರೋಪ ಪಟ್ಟಿ ಸಲ್ಲಿಸಿದೆ. ಅನೇಕ ವಿಷಯ ಹೊರಗೆ ಬಂದಿದ್ದು, ರಾಜ್ಯ ಸರ್ಕಾರ ದಾಖಲಿಸಿದ ಎ್ಐಆರ್‌ನಲ್ಲೇ ಮೋಸ ಮಾಡಿತ್ತು ಎನ್ನುವುದು ಬಯಲಾಗಿದೆ ಎಂದು ಆರಗ ಜ್ಞಾನೇಂದ್ರ ಕುಟುಕಿದರು.

ತೆರೆ ಎಳೆಯಲಿ

ಸುದ್ದಿಗಾರರೊಂದಿಗೆ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಪ್ರತ್ಯೇಕವಾಗಿ ಮಾತನಾಡಿ ಪಕ್ಷದಲ್ಲಿನ ಹೊಂದಾಣಿಕೆ ರಾಜಕಾರಣಕ್ಕೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದ್ದು, ಸಂಘದ ಪ್ರಮುಖರು ಮಧ್ಯೆ ಪ್ರವೇಶಿಸಿ ಗುರುವಾರ ಸಮನ್ವಯ ಬೈಠಕ್ ನಡೆಸಲಿರುವುದು ಸಂತೋಷ ತಂದಿದೆ.

ಈ ಬೈಠಕ್ ಬಗ್ಗೆ ಮಾಧ್ಯಮದಿಂದ ನನಗೆ ಗೊತ್ತಾಗಿದ್ದು, ಆಹ್ವಾನವೇನೂ ಬಂದಿಲ್ಲ, ಒಟ್ಟಿನಲ್ಲಿ ಸಮಸ್ಯೆ ಬಗೆಹರಿದರೆ ಸಾಕು, ಸಂಘ-ಪರಿವಾರದವರ ಪ್ರಯತ್ನದ ಬಗ್ಗೆ ವಿಶ್ವಾಸವಿದೆ.

ಹೊಂದಾಣಿಕೆ ರಾಜಕಾರಣ ಪಕ್ಷದ ಕಾರ್ಯಕರ್ತರಿಗೆ ದ್ರೋಹ ಬಗೆದಂತಾಗುತ್ತದೆ. ಸಂಘಟನಾತ್ಮಕ ಬಲವರ್ಧನೆಗೂ ತೊಡಕು ಉಂಟಾಗಲಿದೆ ಎಂದು ಬಿ.ಪಿ.ಹರೀಶ್ ಕಳವಳ ವ್ಯಕ್ತಪಡಿಸಿದರು.