ನ್ಯೂಸ್

ಬೆಂಕಿ ಹಚ್ಚಿದ್ದೇ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ ತಿರುಗೇಟು

ಬೆಂಗಳೂರು: ತಲತಲಾಂತರದಿಂದ ಕೃಷಿ ಮಾಡಿಕೊಂಡ ಜೀವನ ನಡೆಸುತ್ತಿದ್ದ ರೈತರಿಗೆ ನೋಟಿಸ್ ನೀಡಿ, ಸಚಿವ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಬೆಂಕಿ ಹಚ್ಚಿದ್ದೇ ಕಾಂಗ್ರೆಸ್ ಸರ್ಕಾರವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.

ಐಕ್ಯತಾ ಓಟದಲ್ಲಿ ಮಂಗಳವಾರ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮಾಲೀಕತ್ವದ ಜಮೀನಿಗೆ ವಕ್ಫ್ ಆಸ್ತಿ ತನ್ನದೆಂದು ಹೇಳಿ ನೋಟಿಸ್ ನೀಡಿರುವುದನ್ನು ಪ್ರತಿಪಕ್ಷವಾಗಿ ಬಿಜೆಪಿ ಆಕ್ಷೇಪಿಸಿದೆ.

ಇದನ್ನೇ ಕಾಂಗ್ರೆಸ್ ನವರು ಟೀಕಿಸುತ್ತಾ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಪ್ರತಿಯೊಂದು ಲೋಪ ಎತ್ತಿಹಿಡಿದಾಗ ಬಿಜೆಪಿಯನ್ನು ದೂರುವುದು ಕಾಂಗ್ರೆಸ್ ಚಾಳಿಯಾಗಿದೆ. ವಿಜಯಪುರ ಜಿಲ್ಲೆಯ 120 ರೈತರಿಗೆ ನೋಟಿಸ್ ನೀಡಿದ್ದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ.

ವಿಭಜಕ ಪ್ರವೃತ್ತಿಯ ಕಾಂಗ್ರೆಸ್

ಈ ನೋಟಿಸ್ ನಾವು ಕೊಟ್ಟಿದ್ದಾ ? ಬಿಜೆಪಿ ಮೇಲೆ ಆರೋಪ ಮಾಡುವುದು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮೊದಲು ಮಾಡಬೇಕು. ಅನ್ಯಾಯದ ಬಗ್ಗೆ ಪ್ರಬಲವಾಗಿ‌ ಧ್ವನಿ ಎತ್ತಿರದಿದ್ದರೆ ರೈತರ ಬಾಳಿಗೆ ಬೆಂಕಿ ಹಚ್ಚುತ್ತಿದ್ದರು. ಜಾತಿ, ಧರ್ಮದ ಹೆಸರಿನಲ್ಲಿ ಸಮುದಾಯ, ದೇಶ ವಿಭಜಿಸುವ ಪ್ರವೃತ್ತಿ ಕಾಂಗ್ರೆಸ್ ನದಾಗಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ನಿಂದಾಗಿ ಉಂಟಾಗಿರುವ ತೊಂದರೆ, ನೊಂದ ರೈತರ ಅಹವಾಲು ಆಲಿಸಲು ಹಿರಿಯ ನಾಯಕ ಗೋವಿಂದ ಕಾರಜೋಳ ನೇತೃತ್ವದ ತಂಡ ಇಂದು ವಿಜಯಪುರದಲ್ಲಿದೆ. ವಸ್ತುಸ್ಥಿತಿ ಅಧ್ಯಯನ ಮಾಡಿ ಸಮಗ್ರ ವರದಿ ನೀಡಿದ ನಂತರ ಮುಂದಿನ ಹೆಜ್ಜೆಯಿಡುತ್ತೇವೆ ಎಂದರು.

ಮನಸ್ಸಿಲ್ಲದೆ ಗೊಂದಲ ಸೃಷ್ಟಿ

ಜಾತಿ ಜನಗಣತಿ ವರದಿ, ಪರಿಶಿಷ್ಟ ಜಾತಿಗೆ ಒಳ ಮೀಸಲು ಒದಗಿಸುವ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮನಸ್ಸಿಲ್ಲ, ಇಚ್ಛಾಶಕ್ತಿಯೂ ಇಲ್ಲದ ಕಾರಣ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಹಿಂದಿನ ಅವಧಿಯಲ್ಲಿ ಎಚ್.ಕಾಂತರಾಜು ವರದಿ ಅಂಗೀಕರಿಸಲು ಅವಕಾಶವಿತ್ತು ಎಂದು ಹೇಳಿದರು‌.

ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣದಲ್ಲೂ ಕಾಲಹರಣ ತಂತ್ರ ಅನುಸರಿಸಿದೆ. ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿ ಆದೇಶಿಸಿ ಮೂರು ತಿಂಗಳ ನಂತರ ಅತ್ತ ಗಮನಹರಿಸಿದೆ. ದತ್ತಾಂಶ ಸಂಗ್ರಹಣೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ದತ್ತಾಂಶ ಸಂಗ್ರಹಣೆಗೆ ಏಕ ಸದಸ್ಯ ಆಯೋಗ ರಚಿಸುವುದಾಗಿ ಹೇಳಿದ್ದು, ಒಳ ಮೀಸಲು ತಕ್ಷಣ ಜಾರಿ ಬದಲು ಗೊಂದಲ ಹುಟ್ಟಿ ಹಾಕುವ ಪ್ರಯತ್ನ ಎಂದು ಟೀಕಿಸಿದರು‌.

ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಚಾರಕ್ಕೆ ಬರಲು ನಿರ್ಧರಿಸಿದ್ದು, ಇಳಿವಯಸ್ಸಿನಲ್ಲೂ ಅವರ ಉತ್ಸಾಹ ನಮ್ಮಂತಹ ಯುವಕರಿಗೆ ಪ್ರೇರಣೆಯಾಗಿದೆ.

ಹಿರಿಯರಾದ ದೇವೇಗೌಡರು ಪ್ರಚಾರಕ್ಕೆ ಬಂದರೆ ತಮ್ಮ ಅಭ್ಯರ್ಥಿ ಸೋಲುತ್ತಾರೆ ಎಂದು ತಿಳಿದ ಕಾಂಗ್ರೆಸ್ ನಾಯಕರು ವಿಚಲಿತರಾಗಿ ಲಘುವಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಚಾಟಿ ಬೀಸಿದರು.