ನ್ಯೂಸ್

ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಮೋಸ: ಆರ್.ಅಶೋಕ್ ಟೀಕೆ | Siddaramaih's loan record

ಬೆಂಗಳೂರು: ಬಡ ಕುಟುಂಬಗಳಿಗೆ ಆದಾಯ ಖಾತ್ರಿ, ಆರ್ಥಿಕವಾಗಿ ಬಲವರ್ಧಿಸಲು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿತ್ತು. ಇದೀಗ ಬೆಲೆಗಳ ಏರಿಕೆ ಭಾರ ಇಳಿಕೆಗೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದು ಹೇಳುವ ಮೂಲಕ ಜನರಿಗೆ ಮೋಸ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.

ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳದ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿರುತ್ತದೆ ಎಂದು ಗೊತ್ತಿದ್ದರೂ ಹೇಳಿಕೆ ನೀಡುತ್ತಿದ್ದು, ದೆಹಲಿಗೆ ಪ್ರತಿಭಟನೆ ಮಾಡಲಿ ಎಂದು ಕುಟುಕಿದರು.

ಅತಿ ಹೆಚ್ಚು ಸಾಲದ ದಾಖಲೆ

ಸಿಎಂ ಸಿದ್ದರಾಮಯ್ಯ 16ನೇ ಬಜೆಟ್ ಸಾಧನೆ ಬಗ್ಗೆ ಹೇಳುತ್ತಿದ್ದಾರೆ. ಅದೇ ಕಾಲಕ್ಕೆ ಅತಿ ಹೆಚ್ಚು ಸಾಲ ಮಾಡಿರುವುದೂ ಸಿದ್ದರಾಮಯ್ಯ ಅವರೇ. ರಾಜ್ಯ ಸರ್ಕಾರ ನೌಕರರು, ಪೊಲೀಸರು ಮತ್ತಿತರರಿಗೆ ಸಕಾಲಕ್ಕೆ ಪಾವತಿ ಮಾಡಲಾಗದಷ್ಟು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪೇಮೆಂಟ್ ಆಧಾರದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಪೇಮೆಂಟ್ ಮಾಡುವಲ್ಲಿ ಹಿಂದೆ ಬಿದ್ದಿದ್ದು, ಡಿ.ಕೆ.ಶಿವಕುಮಾರ್ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ.

ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಹಿಂದುಳಿದ ವರ್ಗಗಳ ಸಮಾವೇಶ ಸಂಘಟಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಹಿರಿಯ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜತೆಗೆ ಮಾತನಾಡಿದ್ದೇನೆ ಎಂದು ಆರ್.ಅಶೋಕ್ ತಿಳಿಸಿದರು.