ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 
ನ್ಯೂಸ್

ಅಪಪ್ರಚಾರಕ್ಕೆ ಕಾಂಗ್ರೆಸ್ ಸರ್ಕಾರ ಪ್ರಚೋದನೆ: ವಿಜಯೇಂದ್ರ | Anti Hindu mindset

ಬೆಂಗಳೂರು: ಹಿಂದು ಧರ್ಮ ಅವಹೇಳನ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಹಿಂದುಗಳನ್ನು ಮತಾಂತರಕ್ಕೆ ಪ್ರಚೋದಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಭಾನುವಾರ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಹಿಂದು ಧರ್ಮದಲ್ಲಿ ಸಮಾನತೆಯಿದ್ದರೆ ಬೇರೆ ಧರ್ಮಕ್ಕೆ ಮತಾಂತರ ಆಗುತ್ತಿದ್ದರೇಕೆ ? ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದು, ಹಿಂದು ಧರ್ಮದ ಬಗೆಗಿನ ಅಸಹನೆಯನ್ನು ಬಿಂಬಿಸುತ್ತದೆ ಎಂದು ಕುಟುಕಿದ್ದಾರೆ.

ಗೋ ಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ನಿಷ್ಕ್ರಿಯಗೊಳಿಸಲು ಈಗಾಗಲೇ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಹಿಂದು ಧರ್ಮದ ಜಾತಿಯ ಹೆಸರುಗಳೊಂದಿಗೆ ‘ಕ್ರಿಶ್ಚಿಯನ್’ ಎಂದು ಹೆಸರಿಸಿ ಅಧಿಕೃತವಾಗಿ ಪ್ರಕಟಿಸಿದೆ.

ಇದನ್ನು ಪ್ರಶ್ನಿಸಿದ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದು ಪರ ಸಂಘಟನೆಗಳಿಗೆ ಸೂಕ್ತ ಸ್ಪಷ್ಟನೆ ನೀಡಲು ಒತ್ತಾಯಿಸಿವೆ. ಆಗಿರುವ ಪ್ರಮಾದವನ್ನು ಒಪ್ಪಿಕೊಂಡು ಕ್ರಿಶ್ಚಿಯನ್ ಹೆಸರಿನಲ್ಲಿ ಸೇರ್ಪಡೆಯಾಗಿದ್ದ ಜಾತಿಗಳ ಪಟ್ಟಿಯನ್ನು ತೆಗೆಯುವ ನಿರ್ಧಾರ ಪ್ರಕಟಿಸಬೇಕಾಗಿತ್ತು.

ಆದರೆ ಸಿಎಂ ಸಿದ್ದರಾಮಯ್ಯ ತಾವೊಬ್ಬ ಹಿಂದು ವಿರೋಧಿ ಎಂದು ಬಿಂಬಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಆಡಿರುವ ಮಾತುಗಳು ಪರೋಕ್ಷವಾಗಿ ಮತಾಂತರಕ್ಕೆ ಪ್ರಚೋದನೆ ನೀಡಿದಂತಿದೆ ಎಂದು ಬಿ.ವೈ.ವಿಜಯೇಂದ್ರ ದೂರಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮುಖೇನ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಮಾಹಿತಿ ಸಂಗ್ರಹಿಸುವುದರ ಬದಲು ಮತಾಂತರದ ಹೆಸರನ್ನು ಮುಂದುಮಾಡಿ ಮಾತನಾಡುತ್ತಿರುವ ಸಿಎಂ ನಡೆ ಶಂಕಾಸ್ಪದವಾಗಿದೆ.

ಪ್ರಸ್ತಾಪ, ಪ್ರಶ್ನಿಸುತ್ತಿಲ್ಲವೇಕೆ ?

ಹಿಂದು ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ಸಿಎಂ, ಇಸ್ಲಾಂ ಧರ್ಮದಲ್ಲಿನ ವೈರುಧ್ಯಗಳು, ಮಹಿಳೆಯರ ಮೇಲಿನ ಶೋಷಣೆ, ದೇಶಕ್ಕಿಂತ ಧರ್ಮವೇ ಮೊದಲು ಎನ್ನುವ ಅವರ ಸಿದ್ಧಾಂತವನ್ನು ಏಕೆ ಪ್ರಸ್ತಾಪಿಸುವುದಿಲ್ಲ? ಪ್ರಶ್ನಿಸುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್ ರದ್ದು ಕಾಯ್ದೆ ಜಾರಿಗೆ ತಂದಾಗ ಸ್ವಾಗತಿಸಲಿಲ್ಲ ಏಕೆ ? ಹಿಂದು ಧರ್ಮ, ಪದ್ಧತಿಗಳನ್ನು ಅವಹೇಳನ ಇತರ ಧರ್ಮಿಯರನ್ನು ಓಲೈಸುವುದು ಮಾತ್ರ ಸಿದ್ದರಾಮಯ್ಯನವರ ರಾಜಕೀಯ ಸಿದ್ಧಾಂತವಾಗಿದೆ.

ಸಮಾಜವಾದಿಯೂ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿಪಾದಕರೂ ಅಲ್ಲ. ವಿರೋಧಿ ಮನಸ್ಥಿತಿಯು ರಾಜ್ಯದ ಆಡಳಿತದ ಮೇಲೆ ಪ್ರತಿಬಿಂಬಿತವಾಗಿದೆ. ಅದರ ಪ್ರತೀಕವಾಗಿಯೇ ಸರಣಿ ರೂಪದಲ್ಲಿ ಸರ್ಕಾರದಿಂದ ಹಿಂದು ವಿರೋಧಿ ಧೋರಣೆಗಳು ಅನಾವರಣಗೊಳ್ಳುತ್ತಿವೆ ಎಂದು ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.