ಬೆಂಗಳೂರು: ಹಳೆಯ ಕೇಸ್ ಗೆ ಮರುಜೀವ ನೀಡಿ ಹುಬ್ಬಳ್ಳಿಯಲ್ಲಿ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಳಿದಿದೆ. ರಾಮಭಕ್ತನ ಮೇಲೆ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಹೂಡಿದ ಕಾರ್ಯಕರ್ತರು ಭಾರತ್ ಮಾತಾಕೀ ಜೈ, ಜೈಶ್ರೀರಾಮ್ ಜಯಘೋಷ ಮೊಳಗಿಸಿದರು. ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರ, ರಾಮಭಕ್ತ ವಿರೋಧಿ ಸಿಎಂ ಸಿದ್ದರಾಮಯ್ಯ ಎಂದು ಧಿಕ್ಕಾರ ಕೂಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆದಿದ್ದು, ಇಡೀ ದೇಶದಲ್ಲಿ ಸಂಭ್ರಮ, ಸಡಗರದ ವಾತಾವರಣ ಸೃಷ್ಟಿಯಾಗಿದೆ. ರಾಮನ ಮಂತ್ರಾಕ್ಷತೆ ವಿತರಣೆ, ರಾಮನ ದೀಪಾರಾಧನೆಗೆ ಜನರು ಉತ್ಸಾಹದಿಂದ ಸಜ್ಜಾಗುತ್ತಿದ್ದರೆ, ಕಾಂಗ್ರೆಸ್ ಗೆ ಹಿಂದುಗಳು ಮತ್ತು ರಾಮನ ಭಕ್ತರ ಬಗ್ಗೆ ಭಯ ಶುರುವಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ.ಸಿ.ಮೋಹನ್, ಶಾಸಕರಾದ ಕೆ.ಗೋಪಾಲಯ್ಯ, ಚನ್ನಬಸಪ್ಪ, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತಿತರರು ಕಿಡಿಕಾರಿದರು
ಹುಬ್ಬಳ್ಳಿಯ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ 31 ವರ್ಷಗಳ ಹಿಂದೆ ರಾಮ ಮಂದಿರದಲ್ಲಿ ಹೋರಾಟದಲ್ಲಿ ಭಾಗಿಯಾಗಿದ್ದ ಕೇಸ್ ಮರು ತೆರೆಯಲಾಗಿದೆ. ದಶಕಗಳ ಸುಮ್ಮನಿದ್ದವರು ಈಗ ಎಚ್ಚೆತ್ತಿದ್ದು, ವಾಸ್ತವಾಂಶ ಮರೆಮಾಚಲು ಅನೇಕ ಕೇಸ್ ಗಳಿದ್ದವು ಎಂದು ಸಮಜಾಯಿಷಿ ನೀಡುತ್ತಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಆತನನ್ನು ಈಗ ಬಂಧಿಸಿದ್ದರ ಔಚಿತ್ಯವೇನು ? ಎಂದು ಪ್ರಶ್ನಿಸಿದರು.
ದಬ್ಬಾಳಿಕೆ, ದೌರ್ಜನ್ಯಗಳಿಗೆ ರಾಮನ ಭಕ್ತರು ಬೆದರುವುದಿಲ್ಲ. ಹಿಂದು ಕಾರ್ಯಕರ್ತರು ಕುಗ್ಗುವುದಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲೆಸೆದ ಶಾಸಕ ಚನ್ನಬಸಪ್ಪ, ಮಾಡಿರುವ ತಪ್ಪು ಒಪ್ಪಿಕೊಂಡು ಹಿಂದು ಕಾರ್ಯಕರ್ತನನ್ನು ಬಿಡುಗಡೆ ಮಾಡುವ ಮೂಲಕ ತಿದ್ದಿಕೊಳ್ಳಬೇಕು. ಇಲ್ಲವಾದರೆ ರಾಮ ಭಕ್ತರೇ ನಿಮ್ಮ ಸರ್ಕಾರಕ್ಕೆ ಮುಳುಗು ತರುತ್ತಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭಯ ಕಾಡಲಾರಂಭಿಸಿದ್ದು, ಮತಬ್ಯಾಂಕ್ ರಾಜಕಾರಣಕ್ಕೆ ಇಳಿದಿದೆ. ಒಂದು ಸಮುದಾಯವನ್ನು ಮೆಚ್ಚಿಸುವುದಕ್ಕಾಗಿ ರಾಮಭಕ್ತನ ಮೇಲೆ ದಬ್ಬಾಳಿಕೆ ಮಾಡಿದ್ದು, ಇಂತಹ ಬೆದರಿಕೆ ತಂತ್ರಗಳಿಗೆ ಕಾರ್ಯಕರ್ತರು ಹೆದರುವುದಿಲ್ಲ, ಹಿಂಜರಿಯುವುದಿಲ್ಲ ಎಂದು ಸಂಸದ ಪಿ.ಸಿ.ಮೋಹನ್ ಗುಡುಗಿದರು.
ರಾಮ ಮಂದಿರ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಮಂತ್ರಿ ಎಚ್.ಆಂಜನೇಯ ಹೇಳಿಕೆಗಳ ವಿಡಿಯೋ ತುಣುಕುಗಳನ್ನು ಬೃಹತ್ ಎಲ್ ಇಡಿ ಪರದೆಯ ಪ್ರಸಾರ ಮಾಡಿ, ಕಾಂಗ್ರೆಸ್ ಪಕ್ಷ ರಾಮ ಮಂದಿರ ವಿರೋಧಿ ಎಂದು ನೆರೆದ ಪ್ರತಿಭಟನಾಕಾರರಲ್ಲಿ ಜಾಗೃತಿ ಮೂಡಿಸಲು ಮುಖಂಡರು ಪ್ರಯತ್ನಿಸಿದರು.
ಬೇರೆ ಕಡೆ ರಾಮ ಮಂದಿರ ಕಟ್ಟುವುದಾದರೆ ದೇಣಿಗೆ ನೀಡುವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೊಡಲ್ಲ. ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ಇತ್ಯರ್ಥ ಆಗಿರಬಹುದು. ಇನ್ನೂ ಅನೇಕ ಅಂಶಗಳು ಉಳಿದಿವೆ ಎಂದು ಸಿದ್ದರಾಮಯ್ಯ ಹೇಳಿರುವುದು ಹಾಗೂ ಸಿಎಂ ಸಿದ್ದರಾಮಯ್ಯನೇ ರಾಮ, ಪೂಜೆ ಮಾಡುವುದಕ್ಕೆ ಅಯೋಧ್ಯೆಗೆ ಏಕೆ ಹೋಗಬೇಕು ? ಎಂದು ಎಚ್.ಆಂಜನೇಯ ಪ್ರಶ್ನಿಸಿರುವುದು ಈ ದೃಶ್ಯಾವಳಿಯಲ್ಲಿ ಇವೆ
ಪ್ರತಿಭಟನೆಯಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್, ಶಾಸಕರು, ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರೆ, ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಎಸ್.ಟಿ.ಸೋಮಶೇಖರ್ ಗೈರು ಹಾಜರಾಗಿದ್ದರು.