ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್  
ನ್ಯೂಸ್

ಪರಿಷತ್ ಫೈಟ್​ಗೆ ಕೈ ಕಹಳೆ: ಜಬ್ಬಾರ್, ಯಾದವ್​ಗೆ ಟಿಕೆಟ್; ಕಮಲ-ದಳ ತಣಿಯದ ಕುತೂಹಲ

ಬೆಂಗಳೂರು: ವಿಧಾನಪರಿಷತ್​ನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಸೋಮವಾರ ಸಂಜೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್​ಗೆ ಟಿಕೆಟ್ ಖಾತ್ರಿಪಡಿಸಿದ್ದರೆ, ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ತಡರಾತ್ರಿವರೆಗೂ ಕಸರತ್ತು ಮುಂದುವರಿದಿತ್ತು.

ವಿಧಾನಸಭೆಯ ಬಲಾಬಲದ ಆಧಾರದಲ್ಲಿ ಕಾಂಗ್ರೆಸ್ ಎರಡು ಸ್ಥಾನ ಗೆಲ್ಲಲಷ್ಟೇ ಸಾಧ್ಯ. ಹೀಗಾಗಿ ಇಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡ ಪಕ್ಷದ ವರಿಷ್ಠರು ಆಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಸಿ, ತಾವು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು.

ಸೋಮವಾರ ಸಂಜೆ ಅಬ್ದುಲ್ ಜಬ್ಬಾರ್ ಹಾಗೂ ನಾಗರಾಜ್ ಯಾದವ್ ಹೆಸರನ್ನು ಅಂತಿಮಗೊಳಿಸಿದ ಎಐಸಿಸಿಯು ಪರಿಷತ್ ಸದಸ್ಯರಾಗಲು ಅವಕಾಶ ಮಾಡಿಕೊಟ್ಟಿದೆ. ಬಿ.ಎಲ್.ಶಂಕರ್, ಸುದರ್ಶನ್, ವಿ.ಎಸ್.ಉಗ್ರಪ್ಪ, ಆರ್.ಬಿ.ತಿಮ್ಮಾಪುರ, ಪುಷ್ಪಾ ಅಮರನಾಥ್, ಐವಾನ್ ಡಿಸೋಜ, ಮನ್ಸೂರ್, ಅಬ್ದುಲ್ ಜಬ್ಬಾರ್, ಮನೋಹರ್, ಎಂ.ಆರ್. ಸೀತಾರಾಮ್ ನಿವೇದಿತ್ ಆಳ್ವ, ಎಸ್.ಆರ್.ಪಾಟೀಲ್ ಹೆಸರು ಚರ್ಚೆಗೆ ಬಂದಿತ್ತು.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಪಟ್ಟಿಯನ್ನು ವರಿಷ್ಠರ ಮುಂದೆ ಮಂಡಿಸಿದ್ದರು. ಜತೆಗೆ ಅಭ್ಯರ್ಥಿಗಳು ಪಕ್ಷದ ರಾಜ್ಯ ಉಸ್ತುವಾರಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡಿದ್ದರು. ಪಕ್ಷಕ್ಕಾಗಿ ಹತ್ತು ಹಲವು ವರ್ಷಗಳಿಂದ ದುಡಿದಿದ್ದು ಕೊನೆಯ ಅವಕಾಶ ಕೊಡಿ ಎಂದು ಸಾಕಷ್ಟು ಆಕಾಂಕ್ಷಿಗಳು ಅಹವಾಲು ಮಂಡಿಸಿದ್ದರು, ಇನ್ನು ಕೆಲವರು ಜಾತಿ ಆಧಾರದಲ್ಲಿ ಬೇಡಿಕೆ ಇಟ್ಟಿದ್ದರು. ಪರಿಷತ್​ನಲ್ಲಿ ಕ್ರೖೆಸ್ತ ಸಮುದಾಯದ ಪ್ರತಿನಿಧಿ ಇಲ್ಲ ಎಂದೂ ಧರ್ಮ ಆಧಾರಿತವಾಗಿಯೂ ಬೇಡಿಕೆ ಮುಂದಿಟ್ಟಿದ್ದರು. ಮಹಿಳೆಯರಿಗೆ ಪ್ರಾಧಾನ್ಯತೆ ಕೊಡಿ ಎಂದು ಮನವಿ ಮಾಡಿದ್ದರು. ಹೈಕಮಾಂಡ್ ಅಳೆದು ತೂಗಿ ಅಂತಿಮ ನಿರ್ಣಯಕ್ಕೆ ಬಂದಿದೆ.

ಟಿಕೆಟ್ ಸಿಕ್ಕಿದ್ಹೇಗೆ?: ನಾಗರಾಜ್ ಯಾದವ್-ಗೊಲ್ಲ ಸಮುದಾಯದವರೆಂಬುದನ್ನು ಗಮನದಲ್ಲಿಟ್ಟುಕೊಂಡು ಅವಕಾಶ ನೀಡಲಾಗಿದೆ. ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಸ್ಥಾನಕ್ಕೂ ಅವರ ಹೆಸರು ಶಿಫಾರಸಾಗಿತ್ತು. ಹಿಂದೆ ಕಾಂಗ್ರೆಸ್ ಸರ್ಕಾರದ ಇದ್ದಾಗ ಬಿಎಂಟಿಸಿ ಅಧ್ಯಕ್ಷರಾಗಿದ್ದರು. ಜಬ್ಬಾರ್-ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿದ್ದರು, ಪ್ರಸ್ತುತ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದಾರೆ. ಜಬ್ಬಾರ್​ಗೆ 3ನೇ ಬಾರಿ ವಿಧಾನ ಪರಿಷತ್ ಸದಸ್ಯರಾಗುವ ಯೋಗ ಕೂಡಿಬಂದಿದೆ. ಈ ಹಿಂದೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ದೀರ್ಘ ಅವಧಿಗೆ ಕೆಲಸ ಮಾಡಿದ್ದ ಅವರು, ಮೊದಲ ಬಾರಿ ವಿಧಾನ ಪರಿಷತ್ ಪ್ರವೇಶಿಸಿದ್ದು 2014 ರಲ್ಲಿ. ಬಿಜೆಪಿಯಿಂದ ಮೇಲ್ಮನೆಗೆ ಆಯ್ಕೆಯಾಗಿದ್ದ ಮುಮ್ತಾಜ್ ಅಲಿ ಖಾನ್ ಅವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆಗ ಅವರು 45 ದಿನಗಳ ಮಟ್ಟಿಗೆ ಪರಿಷತ್ ಸದಸ್ಯರಾಗಿದ್ದರು. ನಂತರ 6 ವರ್ಷಗಳ ಅವಧಿಗೆ ಎಂಎಲ್ಸಿಯಾಗಿದ್ದರು.

ಆಯ್ಕೆ ಮಾನದಂಡ: ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತ ಸಮುದಾಯ ಹಾಗೂ ಹಿಂದುಳಿದ ವರ್ಗಕ್ಕೆ ಅವಕಾಶ ಮಾಡಿಕೊಡಬೇಕೆಂದು ನಿರ್ಣಯಕ್ಕೆ ಬರಲಾಗಿತ್ತು. ಹಿಂದುಳಿದ ವರ್ಗದಲ್ಲಿ ಎಂ.ಆರ್.ಸೀತಾರಾಂ ಹಾಗೂ ನಾಗರಾಜ್ ಯಾದವ್ ಹೆಸರು ಅಂತಿಮ ಚರ್ಚೆಯಲ್ಲಿತ್ತು. ಸಿದ್ದರಾಮಯ್ಯ ಇವರ ಹೆಸರನ್ನು ಶಿಫಾರಸು ಮಾಡಿದ್ದರು. ಐವಾನ್ ಡಿಸೋಜ ಅಥವಾ ಅಬ್ದುಲ್ ಜಬ್ಬಾರ್ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ವರಿಷ್ಠರು ಜಬ್ಬಾರ್ ಕಡೆ ಒಲವು ತೋರಿಸಿದರು. ಜಬ್ಬಾರ್ ಹೆಸರನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೇಳಿದ್ದರು. ಅಲ್ಪಸಂಖ್ಯಾತ ಅಭ್ಯರ್ಥಿಯಾಗಿ ಅಬ್ದುಲ್ ಜಬ್ಬಾರ್​ಗೆ ಅವಕಾಶ ನೀಡಬೇಕೆಂದು ಪಕ್ಷದ ಎಲ್ಲ ಮುಸ್ಲಿಂ ಜನಪ್ರತಿನಿಧಿಗಳು ಹೈಕಮಾಂಡ್​ಗೆ ಪತ್ರ ಕೊಟ್ಟು ಒತ್ತಡ ಹೇರಿದ್ದರು. ಒಮ್ಮತದ ಒತ್ತಡ ಆಯ್ಕೆ ವೇಳೆ ಪರಿಣಾಮಕಾರಿಯಾಗಿ ಕಾಣಿಸಿದೆ.

ಬಿಜೆಪಿ ಹೆಜ್ಜೆ ನಿಗೂಢ

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ತೀವ್ರ ಕಸರತ್ತು ಮುಂದುವರಿಸಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ಮೇಲೆ ಗುಂಪೊಂದು ಬಿಗಿ ಹಿಡಿತ ಸಾಧಿಸಿರುವುದೇ ಈ ಪೂರ್ವಭಾವಿ ಕಸರತ್ತಿನ ಮುಖ್ಯಾಂಶವೆಂದು ಮೂಲಗಳು ಮಾಹಿತಿ ನೀಡಿವೆ. ಕೆಲವರ ಹೆಸರು ಕೈಬಿಡುವ ಅಥವಾ ಸೇರಿಸುವ ವಿಷಯದಲ್ಲಿ ಕರ್ನಾಟಕ ಮೂಲದ ದೆಹಲಿ ನಾಯಕರಲ್ಲಿ ಪೈಪೋಟಿ, ಸಹಮತ ಮೂಡದಿರುವುದು ಆಯ್ಕೆ ಪ್ರಕ್ರಿಯೆ ವಿಳಂಬಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಜೆಡಿಎಸ್​ನಲ್ಲಿ ತೀವ್ರ ಪೈಪೋಟಿ

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್​ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೈಕಮಾಂಡ್ ಮನವೊಲಿಕೆಯಿಂದ ಹಿಂದೆ ಸರಿದಿದ್ದಾರೆ. ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತು ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಕಳೆದ ಬಾರಿ ಪರಾಭವಗೊಂಡಿದ್ದ ಕೆ.ಸಿ.ವೀರೇಂದ್ರ ನಡುವೆ ತೀವ್ರ ಪೈಪೋಟಿ ನಡೆದಿದೆ. ಶರವಣ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಮೂಲಕ ಪ್ರಭಾವ ಬೀರುತ್ತಿದ್ದರೆ, ಕೆ.ಸಿ.ವೀರೇಂದ್ರ ಲಿಂಗಾಯತ ಸಮುದಾಯದ ಮತ್ತು ಯುವಕ ಎಂಬ ಕೋಟಾದಲ್ಲಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. 2023ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಲು ವರಿಷ್ಠರು ಆಲೋಚಿಸುತ್ತಿದ್ದಾರೆ. ಕಾರಣ ನಾಮಪತ್ರ ಸಲ್ಲಿಕೆ ಕೊನೆಯ ದಿನವಾದ ಮಂಗಳವಾರವೇ ಅಭ್ಯರ್ಥಿ ಆಯ್ಕೆ ಅಂತಿಮ ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕುದಿಮೌನ ಉಲ್ಬಣ: ಜಬ್ಬಾರ್, ಯಾದವ್ ಆಯ್ಕೆ ಕಾಂಗ್ರೆಸ್ ಚಾವಡಿಯಲ್ಲಿ ಅಚ್ಚರಿಗೆ ಕಾರಣವಾಗಿದೆ. ಇಬ್ಬರನ್ನೂ ತಮ್ಮ ಪಕ್ಷನಿಷ್ಠೆಗೆ ಹೋಲಿಸಿಕೊಂಡ ಆಕಾಂಕ್ಷಿಗಳು ಬೇಸರ ಹೊರಹಾಕಿದ್ದಾರೆ. ರೇಸ್​ನಲ್ಲಿದ್ದವರೆನ್ನೆಲ್ಲ ಪಕ್ಕಕ್ಕೆ ತಳ್ಳಿ ಈ ಆಯ್ಕೆ ಮಾಡಿರುವುದು ಕುತೂಹಲಕ್ಕೂ ಕಾರಣವಾಗಿದೆ. ಪದಾಧಿಕಾರಿ ಆಯ್ಕೆ ವೇಳೆ ಅವಕಾಶ ನೀಡದೇ ಅಸಮಾಧಾನಿತರಾಗಿದ್ದವರೀಗ ಪರಿಷತ್ ಆಕ್ರೋಶಭರಿತರಾಗಿದ್ದಾರೆ.