ಆನವಟ್ಟಿ: ಸುಡು ಬಿಸಿಲಿದ್ದರೂ ಜನತೆ ಸಂಯಮದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಅವರ ಅಭಿವೃದ್ಧಿ ಕಾರ್ಯ, ಆಡಳಿತವನ್ನು ಗಮನಿಸಿ, ದೇಶದ ಭದ್ರತೆ ಹಾಗೂ ಆರ್ಥಿಕ ಸದೃಢತೆಗಾಗಿ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಮಂಗಳವಾರ ಸ್ವಗ್ರಾಮ ಕುಬಟೂರಿನಲ್ಲಿ ಪತ್ನಿ ವಿದ್ಯುಲ್ಲತಾ, ಪುತ್ರ, ಪುತ್ರಿ ಹಾಗೂ ಬಂಧುಗಳೊಂದಿಗೆ ಆಗಮಿಸಿ ಮತ ಚಲಾಯಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬರ ನಿರ್ವಹಣೆಯಲ್ಲಿ ಎಡವಿದೆ. ವರ್ಷ ಕಳೆದರೂ ರೈತರಿಗೆ ಬರ ಪರಿಹಾರ ನೀಡಿಲ್ಲ. ಗ್ಯಾರಂಟಿಗಳ ಕೊಡುವ ನೆಪದಲ್ಲಿ ಆರ್ಥಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಹೆಚ್ಚಾಗಿ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದು ದೂರಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಹಂಕಾರದಿಂದ ವರ್ತಿಸುತ್ತಿದ್ದು, ಶಿಕ್ಷಣ ಕ್ಷೇತ್ರವನ್ನೇ ಹಾಳು ಮಾಡುತ್ತಿದ್ದಾರೆ. ತಾಲೂಕಿನ ಸಮಸ್ಯೆಗಳ ಬಗ್ಗೆ ಯೋಚಿಸದೆ ಸ್ವಾರ್ಥ ಹಾಗೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಭೆಯೊಂದರಲ್ಲಿ ಅವರ ನಾಯಕ ರಾಹುಲ್ ಗಾಂಧಿ ಅವರಿಂದಲೇ ಸಚಿವ ಮಧು ಬಂಗಾರಪ್ಪ ಅಪಮಾನಕ್ಕೊಳಗಾಗಿದ್ದು ತಾಲೂಕಿನ ಗೌರವ ಹಾಳು ಮಾಡಿದ್ದಾರೆ. ಸಚಿವರಾಗಿ ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ನನ್ನ ಹಾಗೂ ರಾಘವೇಂದ್ರ ಅವರ ಅವಧಿಯಲ್ಲಿ ತಂದಿದ್ದ ಅನುದಾನಗಳ ಕಾಮಗಾರಿಗಳನ್ನು ಇವರು ಉದ್ಘಾಟಿಸಲು ಒಂದು ವರ್ಷವೇ ಬೇಕಾಗುತ್ತದೆ. ಈ ಚುನಾವಣೆಯಲ್ಲಿ ರಾಘವೇಂದ್ರ ಮೂರು ಲಕ್ಷಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.