ಹಾನಗಲ್ಲನ ಕುಮಾರೇಶ್ವರ ಮಠದ ಎದುರು ಬಿಜೆಪಿ ಕಾರ್ಯಕರ್ತರು ದಿ. ಸಿ.ಎಂ. ಉದಾಸಿ ಅವರ ಭಾವಚಿತ್ರವನ್ನಿಟ್ಟುಕೊಂಡು ಶಿವರಾಜ ಸಜ್ಜನರ ಗೋ ಬ್ಯಾಕ್ ಎಂದು ಘೊಷಣೆ ಕೂಗಿ ಪ್ರತಿಭಟನೆ ನಡೆಸಿದರು. 
ನ್ಯೂಸ್

ಬಿಎಸ್‌ವೈ ಬೆಳವಣಿಗೆ ಮೇಲೆ ಕೈ ಕಣ್ಣು: ರಾಜ್ಯದ ನಾಯಕರಿಂದ ಅಭಿಪ್ರಾಯ ಸಂಗ್ರಹ, ವೀರಶೈವ ಲಿಂಗಾಯತ ಸೆಳೆಯುವ ತಂತ್ರ

Webdesk - Ravikanth

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಬಿಜೆಪಿಯನ್ನು ರಾಜ್ಯದ ಮೂಲೆಮೂಲೆಯಲ್ಲಿ ಕಟ್ಟಿ ಬೆಳೆಸಲು ಕಾರಣೀಭೂತರಾದ ಬಿ.ಎಸ್. ಯಡಿಯೂರಪ್ಪ ನಂತರ ಆ ಪಕ್ಷದಲ್ಲಿ ಹಾಗೂ ಅವರು ಪ್ರತಿನಿಧಿಸುತ್ತಿದ್ದ ಪ್ರಬಲ ಸಮುದಾಯದಲ್ಲಿ ಉಂಟಾಗಬಹುದಾದ ನಾಯಕತ್ವದ ಕೊರತೆಯ ಲಾಭ ಪಡೆಯುವ ದಿಕ್ಕಿನಲ್ಲಿ ಕಾಂಗ್ರೆಸ್ ನ ದೆಹಲಿ ನಾಯಕರು ಚಿತೆôಸಿದ್ದಾರೆ.

ಮುಂದಿನ ಯಾವುದೇ ಚುನಾವಣೆಗಳು ಬಿಎಸ್ ವೈ ನಾಯಕತ್ವದಲ್ಲಿ ನಡೆಯುವುದಿಲ್ಲ. ಇದರಿಂದ ತನಗೇನು ಲಾಭವಾಗಬಹುದು? ಬಿಜೆಪಿಯಲ್ಲಿ ಆದ ಬದಲಾವಣೆ ಬಳಿಕ ತಮ್ಮ ಪಕ್ಷದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಹಾಗೂ ಆದ್ಯತೆ ಕುರಿತಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಖುದ್ದು ಚಿಂತನ-ಮಂಥನ ನಡೆಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿ ಹತ್ತಕ್ಕೂ ಹೆಚ್ಚು ನಾಯಕರಿಂದ ಕರ್ನಾಟಕದ ಬಿಜೆಪಿ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಕೆಲಸದಲ್ಲಿ ಹೈಕಮಾಂಡ್ ನಿರತವಾಗಿದೆ.

ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ ಪಕ್ಷ ಪುನಃ ಅಧಿಕಾರಕ್ಕೆ ಬರಬಹುದಾದ ಸಾಮರ್ಥ್ಯ ಹೊಂದಿರು ವುದು ಕರ್ನಾಟಕದಲ್ಲಿ ಮಾತ್ರ. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಸೆಮಿಫೈನಲ್ ರೀತಿ ಇರಲಿದೆ. ಇದೇ ಕಾರಣಕ್ಕೆ ಚುನಾವಣೆಗೆ ಇನ್ನೂ 17 ತಿಂಗಳು ಬಾಕಿ ಇದ್ದರೂ ಹೈಕಮಾಂಡ್ ಇಲ್ಲಿನ ರಾಜಕೀಯ ಸಮೀಕರಣದ ಬಗ್ಗೆ ಚಿಂತಿತವಾಗಿದೆ.

ಮೊದಲು ತಮ್ಮ ಪಕ್ಷದ ನಾಯಕರು ಯಾವ ರೀತಿ ಬಿಜೆಪಿಯ ಬೆಳವಣಿಗೆ ಗಮನಿಸಿದ್ದಾರೆಂಬುದನ್ನು ಹೈಕಮಾಂಡ್ ಅರಿಯುತ್ತಿದೆ. ಸೋನಿಯಾ ಹೊರತಾಗಿ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಮಾಹಿತಿ ಕಲೆ ಹಾಕಿದ್ದಾರೆಂದು ಗೊತ್ತಾಗಿದೆ. ಬಿಎಸ್ ವೈ ರಾಜ್ಯದ ಮೂಲೆ ಮೂಲೆಯಲ್ಲೂ ಚಿರಪರಿಚಿತ. ಚುನಾವಣೆ ಎದುರಿಗಿದ್ದಾಗ ಅವರ ಉತ್ಸಾಹ, ತಂತ್ರಗಾರಿಕೆಗಳು, ಓಡಾಟ, ತಾವು ಬೆಳೆಸಿದ ನಾಯಕರ ಬೆಂಬಲ ಮತ್ತು ಅವರ ಬೆನ್ನಿಗೆ ನಿಲ್ಲುತ್ತಿದ್ದ ಪ್ರಬಲ ಸಮುದಾಯ ಬಿಜೆಪಿಗೆ ಲಾಭಕರವಾಗುತ್ತಿತ್ತು. ಪಕ್ಷದ ಕಾರ್ಯಕರ್ತರು, ಸಂಘಟನೆಯ ಜತೆಗೆ ಬಿಎಸ್ ವೈ ಬಲ ಪರಿಣಾಮಕಾರಿಯಾಗುತ್ತಿತ್ತು. ಆದರೆ ಮುಂದೆ ಈ ಶಕ್ತಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿಗೆ ಲಭಿಸಲ್ಲ ಎಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. ಜತೆಗೆ ಬಿಜೆಪಿಯ ಕೊರತೆಗಳನ್ನು ಪಟ್ಟಿ ಮಾಡಿಕೊಂಡು ಅದನ್ನು ತನಗೆ ಅನುಕೂಲವಾಗುವಂತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ವೀರಶೈವ ಲಿಂಗಾಯತರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಮೂಲಕ ಪುನಃ ಆ ಸಮುದಾಯವನ್ನು ಕಾಂಗ್ರೆಸ್ ನತ್ತ ಸೆಳೆಯುವ ಕೆಲಸ ನಡೆಯಲಿದೆ ಎಂದು ಪಕ್ಷದ ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು. ಇದೇ ವಿಚಾರದಲ್ಲಿ ಮುಂದೆ ಕೈಗೊಳ್ಳಬೇಕಾದ ತೀರ್ವನದ ಬಗ್ಗೆ ಹೈಕಮಾಂಡ್ ಶೀಘ್ರವೇ ಸಭೆ ನಡೆಸಲಿದ್ದು, ಪ್ರಮುಖರಿಗೆ ಆಹ್ವಾನ ನೀಡಲಿದೆ ಎಂದು ತಿಳಿದುಬಂದಿದೆ.

ನಷ್ಟ ಭರ್ತಿಗೆ ಯತ್ನ: ವೀರೇಂದ್ರ ಪಾಟೀಲ್ ಅವರನ್ನು ಪದಚ್ಯುತಗೊಳಿಸಿದ ಬಳಿಕ ವೀರಶೈವ ಲಿಂಗಾಯತ ಸಮಾಜ ಕಾಂಗ್ರೆಸ್ ನಿಂದ ಬಹುವಾಗಿ ಅಂತಕಾಯ್ದುಕೊಂಡಿದೆ. ಇದೀಗ ಬಿಎಸ್ ವೈ ಸ್ಥಾನ ಪಲ್ಲಟದ ಬಳಿಕ ಸೃಷ್ಟಿಯಾಗುವ ಆ ಸಮಾಜದ ನಾಯಕತ್ವದ ಕೊರತೆಯನ್ನು ಬಳಸಿಕೊಂಡು ಪುನಃ ಕಾಂಗ್ರೆಸ್ ಗೆ ಆ ಸಮಾಜದ ಮತದಾರರನ್ನು ಸೆಳೆಯಬೇಕೆಂಬ ರಾಜಕೀಯ ತಂತ್ರಗಾರಿಕೆ ಕಾಂಗ್ರೆಸ್ ಹೈಕಮಾಂಡ್ ನದ್ದಾಗಿದೆ.

ಶಿವರಾಜ ಗೋ ಬ್ಯಾಕ್ ಹೋರಾಟ

ಹಾವೇರಿ: ಹಾನಗಲ್ಲ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಹಾವೇರಿಯ ಮಾಜಿ ಶಾಸಕ ಶಿವರಾಜ ಸಜ್ಜನರ ಅವರನ್ನು ಹೈಕಮಾಂಡ್ ಘೊಷಣೆ ಮಾಡಿದೆ. ಇದರ ಬೆನ್ನಲ್ಲೇ ಉದಾಸಿ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ. ಘೊಷಿತ ಅಭ್ಯರ್ಥಿ ಶಿವರಾಜ ಸಜ್ಜನರ ಗೋ ಬ್ಯಾಕ್ ಹೋರಾಟ ಕ್ಷೇತ್ರದಲ್ಲಿ ಚುರುಕುಗೊಂಡಿದೆ.

ಸಜ್ಜನರಗೆ ಟಿಕೆಟ್ ಅಂತಿಮಗೊಂಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆ ಆರಂಭಗೊಂಡವು. ಉದಾಸಿ ಅಭಿಮಾನಿಗಳು ಟೈರ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಉದಾಸಿ ಅವರಿಗೆ ಟಿಕೆಟ್ ಕೊಡಬೇಕು. ಇಲ್ಲವಾದರೆ, ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಘೊಷಿಸಬೇಕು. ನಮ್ಮ ಬೇಡಿಕೆಗೆ ಮನ್ನಣೆ ನೀಡದೇ ಹೋದರೆ ಸಜ್ಜನರ ಗೋ ಬ್ಯಾಕ್ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾನಗಲ್ಲ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಸಾಮೂಹಿಕವಾಗಿ ಪಕ್ಷದ ಹುದ್ದೆಗೆ ರಾಜೀನಾಮೆ ಘೊಷಿಸಿದರು.

ಉದಾಸಿ ಕುಟುಂಬಕ್ಕೆ ಹಿನ್ನಡೆ: ಉಪಚುನಾವಣೆ ಘೊಷಣೆಗೂ ಮುನ್ನವೇ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ ರೇವತಿ ಅವರನ್ನು ಕಣಕ್ಕಿಳಿಸುವ ಮುನ್ಸೂಚನೆ ದೊರೆತಿದ್ದವು. ಹೀಗಾಗಿ ಕಾರ್ಯಕರ್ತರೆಲ್ಲರೂ ಒಮ್ಮತದಿಂದ ಅವರನ್ನು ಬೆಂಬಲಿಸಿದ್ದರು. ಜಾಲತಾಣಗಳಲ್ಲಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ, ಏಕಾಏಕಿ ಸಜ್ಜನರಗೆ ಟಿಕೆಟ್ ಘೊಷಣೆಯಾಗಿದ್ದು, ಉದಾಸಿ ಕುಟುಂಬಕ್ಕೂ ಹಿನ್ನಡೆಯಾದಂತಾಗಿದೆ.

ಕಾಂಗ್ರೆಸ್ ನಿಂದ ಕೀಳುಮಟ್ಟದ ಪ್ರಚಾರ

ವಿಜಯಪುರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದು, ಅದಕ್ಕೆ ತಕ್ಕ ಉತ್ತರವಾಗಿ ಮುಸ್ಲಿಂ ಸಮುದಾಯದ ಮಹಿಳೆಯನ್ನು ಕಣಕ್ಕಿಳಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸಿಂದಗಿ ಉಪಚುನಾವಣೆ ಹಿನ್ನೆಲೆ ಗುರುವಾರ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನು ಕಣಕ್ಕಿಳಿಸಬೇಕೆಂಬುದು ನಮಗೆ ಗೊತ್ತಿದೆ. ಅದನ್ನು ಕಾಂಗ್ರೆಸ್ ನಿಂದ ಕೇಳಿ ತಿಳಿದುಕೊಳ್ಳಬೇಕಿಲ್ಲ ಎಂದರು. 2018ರ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ನವರು ಜೆಡಿಎಸ್ ಬಿಜೆಪಿಯ ‘ಬಿ’ ಟೀಮ್ ಎಂದು ರಾಹುಲ್ ಗಾಂಧಿ ಬಾಯಲ್ಲಿ ಹೇಳಿಸಿದ್ದರು. ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದಾರೆ. ಕಾಂಗ್ರೆಸ್ ನ ಈ ನಡೆಯೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಬಿಜೆಪಿ ಜತೆ ನಾವು ಯಾವುದೇ ಆಂತರಿಕ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಾಗೆ ಮಾಡಿಕೊಂಡಿದ್ದರೆ ಆರ್ ಎಸ್ ಎಸ್ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದರು.

ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಲಿದೆ. ಜೆಡಿಎಸ್ ಗೆ ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್. ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಪ್ರಾಬಲ್ಯವಿದೆ. ಅಲ್ಲಿ ಯಾಕೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಅವರು ಕಣಕ್ಕಿಳಿಸುವುದಿಲ್ಲ.

| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

ಶ್ರೀಮಂತೆ ನಾಜಿಯಾ: ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ, ಸರ್ಕಾರಿ ನೌಕರಿಯಲ್ಲಿರುವ ಪತಿ ಶಕೀಲ್ ಅಂಗಡಿ ಗಿಂತಲೂ ಹೆಚ್ಚು ಶ್ರೀಮಂತೆ. ನಾಜಿಯಾ ಹೆಸರಲ್ಲಿ ಒಟ್ಟು 49,85,912.30 ರೂ. ಹಾಗೂ ಪತಿ ಶಕೀಲ್ ಅಂಗಡಿ ಹೆಸರಲ್ಲಿ 24,70,112 ರೂ. ಚರಾಸ್ತಿ ಇದೆ. 2 ಲಕ್ಷ ರೂ. ನಗದು ನಾಜಿಯಾ ಬಳಿ ಇದೆ. 250 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಹೊಂದಿದ್ದಾರೆ. ಇನ್ನು 12,63,000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತಿ ಶಕೀಲ ಅಂಗಡಿ 9,60,000 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಾಜಿಯಾ ಹೆಸರಲ್ಲಿ ಯಾವುದೇ ಸಾಲ ಇಲ್ಲ.

8 ಕೋಟಿ ಆಸ್ತಿಯೊಡೆಯ ಶ್ರೀನಿವಾಸ ಮಾನೆ: ಹಾನಗಲ್ಲ ಉಪಚುನಾ ವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀನಿವಾಸ ಮಾನೆ, ಕುಟುಂಬದ ಸ್ಥಿರ ಹಾಗೂ ಚರಾಸ್ತಿ ಸೇರಿ 8.28 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೊಷಿಸಿಕೊಂಡಿದ್ದಾರೆ. ಶ್ರೀನಿವಾಸ ಮಾನೆ ಹೆಸರಿನಲ್ಲಿ 2.26 ಕೋಟಿ ರೂ. ಚರಾಸ್ತಿಯಿದೆ. ಪತ್ನಿ ಹೆಸರಿನಲ್ಲಿ 64.98 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 2.94 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಮಾನೆ ಹೆಸರಿನಲ್ಲಿ 1.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಪತ್ನಿ ಹೆಸರಿನಲ್ಲಿ 3.87 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 62.19 ಲಕ್ಷ ರೂ. ಮೌಲ್ಯದ ಆಸ್ತಿಯಿದೆ. ಚರ ಹಾಗೂ ಸ್ಥಿರಾಸ್ತಿ ಸೇರಿ 8.28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದಾರೆ. ಇನ್ನು ಶ್ರೀನಿವಾಸ ಮಾನೆ ಅವರಿಗೆ 1.79 ಕೋಟಿ ರೂ. ಸಾಲ, ಪತ್ನಿ ಹೆಸರಿನಲ್ಲಿ 7.20 ಲಕ್ಷ ರೂ. ಸಾಲವಿದೆ.

ಮುಸ್ಲಿಂ ಮತಕ್ಕಾಗಿ ಕಾಂಗ್ರೆಸ್-ದಳ ಕಿತ್ತಾಟ

ಬೆಂಗಳೂರು: ಮುಸ್ಲಿಂ ಮತದಾರರನ್ನು ಸೆಳೆಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಶುರುವಾಗಿದೆ. ಮುಸ್ಲಿಂ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬಹುದು ಎಂಬುದು ರಣತಂತ್ರವಾಗಿದ್ದು, ಇದೇ ಕಾರಣಕ್ಕೆ ಆ ಸಮುದಾಯಕ್ಕೆ ಹೆಚ್ಚು ಒತ್ತುಕೊಡಲಾಗಿದೆ.

ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಶೇ.13 ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, 25ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಇವರೇ ನಿರ್ಣಾಯಕರು. ಇನ್ನು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಈ ವರ್ಗದ ಮತಗಳು ಬಿಜೆಪಿಯೇತರ ಎಂದು ಗುರುತಿಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಹಂಚಿಕೆಯಾಗುತ್ತಲೇ ಬಂದಿವೆ. ಆದರೆ, 2013ರ ವಿಧಾನಸಭೆ ಚುನಾವಣೆ ಬಳಿಕ ಈ ಮತ ಸಾರಾಸಗಟಾಗಿ ಕಾಂಗ್ರೆಸ್ ಕಡೆ ಒಲಿದಿವೆ. 2014ರ ಲೋಕಸಭಾ ಚುನಾವಣೆ ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲೂ ಇದು ಮುಂದುವರಿಯಿತು. ಇನ್ನೊಂದು ಬೆಳವಣಿಗೆಯಲ್ಲಿ ಜೆಡಿಎಸ್ ನಿಂದ ದೂರಾಗಿ ಕಾಂಗ್ರೆಸ್ ಪ್ರವೇಶಿಸಿದ ಸಿದ್ದರಾಮಯ್ಯ, ‘ಅಹಿಂದ’ ಸಮೀಕರಣದಲ್ಲಿ ಅಲ್ಪಸಂಖ್ಯಾತ ಮತಗಳನ್ನು ಹೆಚ್ಚುಪಾಲು ತಮ್ಮತ್ತ ಒಟ್ಟುಮಾಡಿಕೊಟ್ಟರು. ಹಾಗೆಯೇ ಪದೇಪದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಹೇಳುತ್ತಾ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಬಿಟ್ಟುಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಜೆಡಿಎಸ್ ಗೆ ಇದು ಮನವರಿಕೆ ಆಗುವಷ್ಟರಲ್ಲಿ ವರ್ಷಗಳೇ ಕಳೆದಿದ್ದು, ಇದೀಗ ಎಚ್ಚೆತ್ತುಕೊಂಡು ಶತಾಯಗತಾಯ ಮುಸ್ಲಿಂ ಮತಗಳನ್ನು ಹೆಚ್ಚು ಪಡೆದರೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಿದೆ ಎಂದು ಅರಿತು, ಆ ವರ್ಗದ ಓಲೈಕೆಗೆ ವಿಶೇಷ ಆಸಕ್ತಿ ತೋರಿದೆ. ಈ ರಾಜಕೀಯ ತಂತ್ರಗಾರಿಕೆಗೆ ಜೆಡಿಎಸ್ ಬಳಸಿಕೊಂಡಿದ್ದು ಆರ್ ಎಸ್ ಎಸ್ ವಿಚಾರ. ಪುನಃ ಅದನ್ನೇ ಪ್ರಸ್ತಾಪಿಸಿ ಮುಸ್ಲಿಂ ಸಮುದಾಯದ ಗಮನ ಸೆಳೆಯಲು ಪ್ರಯತ್ನ ಹಾಕಿದೆ. ಕಾಂಗ್ರೆಸ್ ಕೂಡ ಅದೇ ದಾಟಿಯಲ್ಲಿದೆ. ಆದರೆ, ಕಾಂಗ್ರೆಸ್ ಕಡೆಯಿಂದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ಮಾತ್ರ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ.

ಹಲವರಿಗೆ ವಿಶೇಷ ಜವಾಬ್ದಾರಿ: ಜೆಡಿಎಸ್ ಇತ್ತೀಚೆಗೆ ಈ ವಿಷಯದಲ್ಲಿ ಆಕ್ರಮಣ ಶೀಲತೆ ತೋರುತ್ತಿರುವುದನ್ನು ನಿರೀಕ್ಷಿದ ಕಾಂಗ್ರೆಸ್ ಕೊಂಚ ಗಲಿಬಿಲಿಯಾದರೂ ಸುಧಾರಿಸಿಕೊಂಡು, ಪಕ್ಷದ ಮುಸ್ಲಿಂ ಶಾಸಕರಿಗೆ ವಿಶೇಷ ಜವಾಬ್ದಾರಿ ನೀಡಲು ಚಿಂತನೆ ನಡೆಸಿದೆ.

ಶಾಸಕರಾದ ಜಮೀರ್ ಅಹ್ಮದ್, ರಿಜ್ವಾನ್ ಅರ್ಷದ್, ಎನ್.ಎ.ಹ್ಯಾರೀಸ್, ಯು.ಟಿ.ಖಾದರ್, ರಹೀಂ ಖಾನ್, ತನ್ವೀರ್ ಸೇಠ್ ಅವರಿಗೆ ವಿಶೇಷ ಜವಾಬ್ದಾರಿ ನೀಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆದಿದೆ. ಜೆಡಿಎಸ್ ಉಪ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿರಬಹುದು ಮತ್ತು 2023ರಲ್ಲೂ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ನೀಡಬಹುದು. ಆದರೆ, ಹಾಲಿ ಶಾಸಕರು ಹೆಚ್ಚು ಮುಸ್ಲಿಂ ಮತದಾರರಿರುವ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ, ನಾಯಕತ್ವ ತೋರಿಸಿ ಎಂದು ಪಕ್ಷ ಸೂಚನೆ ನೀಡಲು ತಯಾರಿ ನಡೆಸಿದೆ ಎಂದು ಗೊತ್ತಾಗಿದೆ.

ಬೆಲೆ ಏರಿಕೆಯಿಂದ ನಿತ್ಯವೂ ಜನರ ಜೇಬಿನಲ್ಲಿರುವ ಹಣ ಪಿಕ್ ಪಾಕೆಟ್ ಆಗುತ್ತಿದೆ. ಈ ನೋವನ್ನು ಹೇಳಿಕೊಳ್ಳಲು ಉಪ ಚುನಾವಣೆ ಮತದಾರರ ಮುಂದಿರುವ ಒಂದು ಉತ್ತಮ ಅವಕಾಶ. ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ.| ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ