ನ್ಯೂಸ್

ದಿಲ್ಲಿಗೆ ನಿಯೋಗ ಹೋಗೋಣ: ಆರ್ಥಿಕ ನೆರವು ಕೇಳೋಣ, ಸಿಎಂ ಯಡಿಯೂರಪ್ಪಗೆ ಕಾಂಗ್ರೆಸ್ ಒತ್ತಾಯ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಸಂಬಂಧ ಗಮನ ಸೆಳೆಯಲು ಪ್ರತಿಪಕ್ಷ ಸಹಿತ ನವದೆಹಲಿಗೆ ನಿಯೋಗ ಕರೆದೊಯ್ಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡ ಭಾನುವಾರ ಸಿಎಂ ಅವರನ್ನು ಭೇಟಿ ಮಾಡಿ ಕರೊನಾ ನಿರ್ವಹಣೆ ಬಗ್ಗೆ ಪಕ್ಷದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಮನವಿ ಸಲ್ಲಿಸಿತು. ನೆರೆ ಪರಿಹಾರ, ತೆರಿಗೆ, ತೆರಿಗೆ ಸಂಗ್ರಹದಲ್ಲಿ ರಾಜ್ಯದ ಪಾಲು, ಕರೊನಾ ಸೋಂಕು ನಿಯಂತ್ರಣಕ್ಕೆ ನೀಡಬೇಕಾದ ಅನುದಾನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಬಾರಿ ಪ್ರಸ್ತಾಪಿಸಿದ್ದೀರಿ. ಹೀಗಿರುವಾರ ದೆಹಲಿಗೆ ನಿಯೋಗವನ್ನು ಕೊಂಡೊಯ್ದು ನಮಗಾಗಿರುವ ಅನ್ಯಾಯ ಸರಿಪಡಿಸಬೇಕೆಂದು ಒತ್ತಾಯಿಸೋಣ ಎಂದು ಕೈ ಮುಖಂಡರು ತಿಳಿಸಿದರು.

ರೋಗ ಹರಡುವಿಕೆಯು ರಾಜ್ಯ ಹಾಗೂ ರಾಷ್ಟ್ರದಲ್ಲಿ ಏರುಮುಖವಾಗಿದೆಯೇ ಹೊರತು ನಿಯಂತ್ರಣಕ್ಕೆ ಬಂದಿರುವ ಸೂಚನೆಗಳು ಕಾಣುತ್ತಿಲ್ಲ. ಅದಕ್ಕೆ ಕಾರಣಗಳನ್ನು ಸರ್ಕಾರವೇ ತಿಳಿಸಬೇಕು. ಡಬ್ಲೂ್ಯಎಚ್​ಓ ಮಾರ್ಗಸೂಚಿ ಪ್ರಕಾರ, ಕರೋನಾ ನಿಯಂತ್ರಿಸಲು 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ. ಆದರೆ ಇಲ್ಲಿಯವರೆಗೂ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ರೋಗಿಗಳು ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಾ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು. ಒಟ್ಟು 12 ಲಕ್ಷ ಪರೀಕ್ಷಾ ಕಿಟ್​ಗಳ ಅಗತ್ಯವಿದ್ದರೆ, 2,27,000 ಕಿಟ್ ಮಾತ್ರ ಲಭ್ಯವಿವೆ. ಎನ್-95 ಮಾಸ್ಕ್​ಗಳು ಕೇವಲ 5,46,721 ಮತ್ತು ಹೈಡ್ರಾಕ್ಸಿಕ್ಲೋರಾಕ್ಸಿನ್ ಮಾತ್ರೆಗಳು 2,79,999 ಲಭ್ಯವಿವೆ ಎಂದು ತಿಳಿದುಬಂದಿದೆ ಎಂದು ಆತಂಕವನ್ನು ಹೊರಹಾಕಿದರು. ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆಸ ಯುದ್ಧೋಪಾದಿಯಲ್ಲಿ ರಾಜ್ಯದ ಜನರನ್ನು ಕರೋನಾದಿಂದ ದೂರ ಮಾಡಲು ಮತ್ತು ಜನರು ನೆಮ್ಮದಿಯಿಂದ ಜೀವನ ನಡೆಸಲು ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖವಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು. ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ರಮೇಶ್​ಕುಮಾರ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಡಿ.ಕೆ.ಸುರೇಶ್, ಸಲೀಂ ಅಹ್ಮದ್, ಅಜಯ್ ಸಿಂಗ್ ನಿಯೋಗದಲ್ಲಿದ್ದರು.

ಮೌನ ಸರಿಯಲ್ಲ

ಕರೊನಾ ವಿಚಾರದಲ್ಲಿ ಒಂದು ಸಮುದಾಯದವರನ್ನು ಮಾತ್ರ ಗುರಿಯಾಗಿಟ್ಟುಕೊಂಡು ಕೆಲ ಶಾಸಕರು, ಸಂಸದರು ಟೀಕೆ ಮಾಡುತ್ತಿದ್ದಾರೆ. ನೀವೇ (ಸಿಎಂ) ಮನವಿ ಮಾಡಿಕೊಂಡರೂ ಹೇಳಿಕೆ ಕೊಡುವುದನ್ನು ಕೆಲವರು ನಿಲ್ಲಿಸುತ್ತಿಲ್ಲ. ಅಂಥವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ. ಈ ವಿಷಯದಲ್ಲಿ ಪೊಲೀಸರ ಮೌನವೂ ಸರಿಯಲ್ಲ ಎಂದು ಸಿದ್ದರಾಮಯ್ಯ ಅವರು ಸಿಎಂ ಗಮನ ಸೆಳೆದರು.

ಕೇಸ್ ದಾಖಲಿಸಿ

ರಾಜ್ಯದ ಹಲವಾರು ಕಡೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದಾನಾತ್ಕಕ ಸಂದೇಶ ಪ್ರಕಟಿಸಿದವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ, ಪೊಲೀಸ್ ಅಧಿಕಾರಿಗಳನ್ನೇ ಕಡ್ಡಾಯ ರಜೆ ಮೇಲೆ ಕಳುಹಿಸಿ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸಲಾಗಿದೆ. ಕೂಡಲೇ ಸರ್ಕಾರ ಇಂತಹ ಪೊಲೀಸರ ಮೇಲೆ ಕೈಗೊಂಡಿರುವ ಕ್ರಮಗಳನ್ನು ವಾಪಸ್ ಪಡೆದು ಅಪರಾಧ ಎಸಗಿರುವ ಆರೋಪಿತರ ಮೇಲೆ ಕೇಸು ದಾಖಲಿಸಿ, ಅವರನ್ನು ದಸ್ತಗಿರಿ ಮಾಡಬೇಕು ಎಂದು ನಿಯೋಗ ಒತ್ತಾಯಿಸಿತು.

ರಾಜ್ಯ ಸರ್ಕಾರಕ್ಕೆ ಕೈ ಸಲಹೆಗಳು

=ಕರೊನಾವನ್ನು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ, ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡುವಂತೆ ಕೇಂದ್ರದ ಮೇಲೆ ಒತ್ತಡ =ಪ್ಯಾರಾ ಮೆಡಿಕಲ್ ಸಿಬ್ಬಂದಿ, ದಾದಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೂ ವಿಮಾ ಸೌಲಭ್ಯ ವಿಸ್ತಾರ. ಕನಿಷ್ಠ ಒಂದು ತಿಂಗಳ ವಿಶೇಷ ಭತ್ಯೆ ನೀಡಿಕೆ =ಕರೊನೇತರ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ, ಕೂಡಲೇ ಖಾಸಗಿ ಆಸ್ಪತ್ರೆ ಓಪನ್ =ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಡಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ =ಸರ್ಕಾರದ ಅನುದಾನ, ಪರಿಹಾರದಲ್ಲಿ ಅನ್ಯಪಕ್ಷದವರಿಗೆ ತಾರತಮ್ಯ ಬೇಡ =ಲಕ್ಷಾಂತರ ಕಾರ್ವಿುಕರು ಅತ್ಯಂತ ಕಷ್ಟದಲ್ಲಿ ಬದುಕುತ್ತಿದ್ದು, ಅವರ ಊರಿಗೆ ಕಳಿಸಲು ವ್ಯವಸ್ಥೆ =ನೋಂದಾಯಿತ ನರೇಗಾ ಕಾರ್ವಿುಕರಿಗೆ ಲಾಕ್​ಡೌನ್ ಅವಧಿಯ ದಿನಗೂಲಿ ನೀಡಿಕೆ =ಸವಿತಾ ಸಮಾಜ, ಮಡಿವಾಳ, ಬಡಗಿ, ಕುಂಬಾರ, ನೇಕಾರ, ಅಕ್ಕಸಾಲಿ ಗರು, ದೇವಸ್ಥಾನ ಅರ್ಚಕರಿಗೆ ಪ್ರತಿ ತಿಂಗಳೂ -ಠಿ;10 ಸಾವಿರ ಸಹಾಯಧನ.

ಎಲ್ಲ ಜಿಲ್ಲೆಗಳಲ್ಲಿ ಲ್ಯಾಬ್ ಸ್ಥಾಪಿಸುವಂತೆ ಆಗ್ರಹ

ರಾಜ್ಯದಲ್ಲಿ ಸೋಂಕು ದಿನೇದಿನೆ ಹೆಚ್ಚುತ್ತಿರುವ ಕಾರಣ ತ್ವರಿತ ತಪಾಸಣೆ ಹಾಗೂ ಪರಿಣಾಮಕಾರಿ ಕ್ರಮಕ್ಕಾಗಿ ಏ.30ರೊಳಗೆ ಪ್ರತಿ ಜಿಲ್ಲೆಗೊಂದು ಪ್ರಯೋಗಾಲಯ ಸ್ಥಾಪಿಸಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಗೋವಾದಲ್ಲಿ ರಾಜ್ಯದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಗೋವಾ ಮುಖ್ಯಮಂತ್ರಿ ಜತೆ ಮಾತನಾಡಿ ಅವರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು. ಎಂದು ಒತ್ತಾಯಿಸಿದ್ದಾರೆ.