ನ್ಯೂಸ್

ಕಳಸಾ-ಬಂಡೂರಿ ಯೋಜನೆಗೆ ಕಾಂಗ್ರೆಸ್ ಪ್ರಯತ್ನ ಮಾಡಿಲ್ಲ, ಬಿಜೆಪಿ ಅವಧಿಯಲ್ಲೇ ಎಲ್ಲಾ ಆಗಿದ್ದು; ಪ್ರಲ್ಹಾದ್‌ ಜೋಶಿ

ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರದವರು ಪ್ರಧಾನಿ ಬಳಿ ನಿಯೋಗ ಬರುವುದಾದರೆ ಮುಕ್ತ ಸ್ವಾಗತ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಂದು ವೇಳೆ ಬಂದರೆ ಸ್ವಾಗತಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು. ಮಹದಾಯಿ ವಿಚಾರದಲ್ಲಿ ಸರ್ವ ರೀತಿಯಲ್ಲೂ ರಾಜ್ಯಕ್ಕೆ ಸಹಾಯ ಮಾಡಲು ಕೇಂದ್ರ ಸಿದ್ಧವಿದೆ. ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಏನು ಮಾಡಿಲ್ಲ: ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಏನು ಪ್ರಯತ್ನ ಮಾಡಿಲ್ಲ. ರಾಜ್ಯದಲ್ಲಿ, ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದಾಗಲೂ ಕಾಂಗ್ರೆಸ್ ನವರು ಏನೂ ಮಾಡಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲೇ ಎಲ್ಲಾ ಆಗಿದ್ದು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹದಾಯಿಗೆ ಪ್ರಯತ್ನ ನಡೆದದ್ದು, ನ್ಯಾಯಾಧಿಕರಣ, ಕಚೇರಿ, ಸಿಬ್ಬಂದಿ ನೇಮಕ, ಗೆಜೆಟ್ ನೊಟಿಫಿಕೇಷನ್, ಡಿಪಿಆರ್ ಅನುಮೋದನೆ ಹೀಗೆ ಪ್ರತಿಯೊಂದೂ ಬಿಜೆಪಿ ಅವಧಿಯಲ್ಲೇ ಆಗಿದೆ ಎಂದು ಹೇಳಿದರು.

ಮಹದಾಯಿ ಅರಣ್ಯ ಭೂಮಿ ವ್ಯಾಪ್ತಿಯಲ್ಲಿ ಬರುವುದರಿಂದ ಈಗ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಬೇಕಿದ್ದು, ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದು ಸಚಿವ ಜೋಶಿ ತಿಳಿಸಿದರು.