ನ್ಯೂಸ್

ಅತಿ ಹೆಚ್ಚು ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುತ್ತೇವೆ

ರಾಜಣ್ಣ

ಸರಗೂರು: ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಗೆಲ್ಲಿಸುತ್ತೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಆಶಾಭಾವನೆ ವ್ಯಕ್ತಪಡಿಸಿದರು.


ತಾಲೂಕಿನ ನಾಡದೇವತೆ ಚಿಕ್ಕದೇವಮ್ಮನ ಬೆಟ್ಟಕ್ಕೆ ಮಂಗಳವಾರ ಅಭ್ಯರ್ಥಿ ಸುನೀಲ್ ಬೋಸ್ ಹಾಗೂ ಕಾರ್ಯಕರ್ತರೊಡಗೂಡಿ ತಾಯಿ ಚಿಕ್ಕದೇವಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಅನಿಲ್ ಚಿಕ್ಕಮಾದು ಮಾತನಾಡಿದರು.


ಸರಗೂರು ಮತ್ತು ಕೋಟೆ ತಾಲೂಕಿನ ಜನತೆ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅತಿಹೆಚ್ಚು ಮತಗಳನ್ನು ನೀಡಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದೇವೆ, ಸುನೀಲ್ ಬೋಸ್ ಅವರನ್ನು ಗೆಲ್ಲಿಸಿ ಅವರನ್ನು ಅಸೆಂಬ್ಲಿಗೆ ಕಳುಹಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.


ಹಿರಿಯ ರಾಜಕಾರಣಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರು ಕಾಂಗ್ರೆಸ್ ಸೇರಿರುವುದು ನಮಗೆ ಆನೆ ಬಲ ಬಂದಂತಾಗಿದೆ ಎಂದರು.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ನಾಯಕರು ಜತೆಗೂಡಿ ರಾಜ್ಯದ ಬಡ ಜನರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಾಜಿ ಸಂಸದ ಆರ್. ಧ್ರುವನಾರಾಯಣ ಅವರನ್ನು ಎರಡು ಬಾರಿ ಎಚ್. ಡಿ.ಕೋಟೆ ಮತ್ತು ಸರಗೂರು ತಾಲೂಕಿನಿಂದ ಹೆಚ್ಚು ಮತ ನೀಡಿ ಗೆಲ್ಲಿಸಿ ಕೊಟ್ಟಿದ್ದೀರಿ. ನಾನೂ ಅವರಂತೆ ಕೆಲಸ ಮಾಡುತ್ತೇನೆ, ನನ್ನನ್ನೂ ಗೆಲ್ಲಿಸಿ ತಾಲೂಕು ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.


ಮೈಮುಲ್ ಈರೇಗೌಡ, ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಿರ್ವಾಳ್ ಬಸವರಾಜು, ನಾಯಕ ಸಮಾಜ ಅಧ್ಯಕ್ಷ ಶಂಭುಲಿಂಗ ನಾಯಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೂವಿನಕೊಳ ಸಿದ್ದರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ದೇವಲಾಪುರ ಸಿದ್ದರಾಜು, ವರಣ ಮಹೇಶ್, ಹಾದನೂರು ಗ್ರಾಪಂ ಉಪಾಧ್ಯಕ್ಷ ಪ್ರಕಾಶ್, ಗ್ರಾಪಂ ಸದಸ್ಯ ಭಾಗ್ಯ ಕೆಂಪಸಿದ್ದ, ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ, ಸತೀಶ್ ಗೌಡ, ಶಿವಪ್ಪ ಕೋಟೆ, ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.