ನ್ಯೂಸ್

ಪಶ್ಚಿಮ ಬಂಗಾಳ ಚುನಾವಣೆ : ಕಾಂಗ್ರೆಸ್ ಪ್ರಚಾರಕರ ಪಟ್ಟಿ ಸಿದ್ಧ

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳ ವಿಚಾರದಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳ ಗದ್ದಲ ಮುಗಿಲುಮುಟ್ಟಿದೆ. ಈ ನಡುವೆ ಮತ್ತೊಂದು ಪ್ರಮುಖ ಪ್ರತಿಸ್ಪರ್ಧಿ ಎಂದರೆ ಕಾಂಗ್ರೆಸ್​ ಮತ್ತು ಎಡಪಕ್ಷಗಳ ಒಕ್ಕೂಟ. ಇದೀಗ ಕಾಂಗ್ರೆಸ್ ಬಂಗಾಳದಲ್ಲಿ ತನ್ನ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಹೊರಟಿದ್ದು, 30 ಸ್ಟಾರ್ ಕಾಂಪೇನರ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಪ್ರಚಾರಕರ್ತರ ಪಟ್ಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಚಿನ್ ಪೈಲಟ್, ನವಜೋತ್ ಸಿಂಗ್ ಸಿಧು, ಅಭಿಜಿತ್ ಮುಖರ್ಜಿ ಮತ್ತು ಮೊಹಮ್ಮದ್ ಅಜರುದ್ದೀನ್ ಸೇರಿದ್ದಾರೆ. ಕಾಂಗ್ರೆಸ್​ ಪಕ್ಷದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಭೂಪೇಶ್ ಬಾಗೇಲ್ ಕೂಡ ಈ ಪಟ್ಟಿಯಲ್ಲಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಕಾಂಗ್ರೆಸ್​ನ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಮತ್ತು ಮನೀಶ್ ತಿವಾರಿ ಸೇರಿದಂತೆ ಪ್ರಮುಖ ಜಿ -23 ಸದಸ್ಯರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಜಿ-23 ನಾಯಕರು, 'ಬಲಹೀನಗೊಳ್ಳುತ್ತಿರುವ ಕಾಂಗ್ರೆಸ್​​ಗೆ ಪರಿಣಾಮಕಾರಿ ನೇತೃತ್ವದ ಅಗತ್ಯ ಇದೆ' ಎಂದು ಇತ್ತೀಚೆಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷಕ್ಕೆ ಮುಜುಗರದ ಸನ್ನಿವೇಶ ಉಂಟುಮಾಡಿದ್ದರು.

ಅಧಿಕ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಆಜಾದ್​​ರಂಥ ನಾಯಕರನ್ನು ಪ್ರಚಾರಕ್ಕೆ ಬಳಸದೆ ಇರಲು ಕಾಂಗ್ರೆಸ್ ಮುಂದಾಗಿದೆ. ಮಾಜಿ ಕ್ರಿಕೆಟಿಗ ಅಜರುದ್ದೀನ್ ಮತ್ತು ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್​ ಅವರನ್ನು ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿ ಆಜಾದ್​​ರ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ