ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ನಾಯಕನ ಆಯ್ಕೆಗೆ ಮೊದಲ ಆದ್ಯತೆ ನೀಡಬೇಕು. ಅನಿಶ್ಚಿತತೆಯನ್ನು ಆದಷ್ಟು ಬೇಗ ನಿವಾರಿಸಬೇಕು. ಇಲ್ಲದಿದ್ದಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹಿರಿಯ ಮುಖಂಡ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬರುವುದು ಬಿಡುವುದು ರಾಹುಲ್ ಗಾಂಧಿ ಅವರಿಗೆ ಬಿಟ್ಟ ವಿಚಾರ. ಅವರು ತಮ್ಮ ನಿಲುವನ್ನು ಬದಲಾಯಿಸದಿದ್ದರೆ, ಪಕ್ಷ ಪರ್ಯಾಯವಾಗಿ ಯೋಚಿಸಬೇಕು. ರಾಷ್ಟ್ರದ ನಿರೀಕ್ಷೆಯಂತೆ ಕಾಂಗ್ರೆಸ್ ಮುಂದುವರಿಯಲು ಸಕ್ರಿಯ ಮತ್ತು ಪೂರ್ಣ ಪ್ರಮಾಣದ ನಾಯಕತ್ವ ಇಂದಿನ ಅವಶ್ಯಕತೆ ಎಂದರು.
ಪಕ್ಷದ ಅನಿಶ್ಚಿತತೆಯಿಂದ ಮತದಾರರು ಬೇರೆ ಪಕ್ಷಗಳತ್ತ ವಾಲುವ ಸಾಧ್ಯತೆ ಹೆಚ್ಚಿವೆ. ಇದಕ್ಕೆ ಬಲವಾದ ಉದಾಹರಣೆ ಎಂದರೆ ಇತ್ತೀಚೆಗೆ ಬಂದ ದೆಹಲಿ ವಿಧಾನಸಭಾ ಫಲಿತಾಂಶ. ಅಲ್ಲಿ ಆಪ್ ಪಕ್ಷಕ್ಕೆ ಮತದಾರ ಒಲಿದರೆ, ಬಿಜೆಪಿಗೂ ಶೇಕಡವಾರು ಮತಗಳು ಹೆಚ್ಚಿದವು ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬವೋ ಅಥವಾ ಗಾಂಧಿಯೇತರರೋ ಎನ್ನುವ ಮತ್ತೆ ಅದೇ ಎಂದಿನ ಪ್ರಶ್ನೆಗೆ ಮಾರ್ಮಿಕವಾಗಿ "ಮರಗಳಿಗಾಗಿ ಮರಗಳ ಕಳೆದುಕೊಂಡಂತೆ" ಎಂದು ಉತ್ತರಿಸಿದರು.
ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಮರಳದಿದ್ದರೆ, ಪ್ರಿಯಾಂಕಾ ಗಾಂಧಿ ಆ ಸ್ಥಾನ ತುಂಬಬೇಕು. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾದರೆ, ಅವರು ಅಖಾಡಕ್ಕಿಳಿಯುತ್ತಾರೆ ಎಂದು ನಾನು ಭಾವಿಸಿದ್ದೇನೆ. ಅವರಿಗೆ ಆ ಚರಿಷ್ಮಾ ಹಾಗೂ ನಾಯಕತ್ವದ ಗುಣವೂ ಇದೆ. ಆದರೆ ಅಂತಿಮ ತೀರ್ಮಾನ ಅವರಿಗೇ ಬಿಟ್ಟದ್ದು ಎಂದು ತರೂರ್ ಹೇಳಿದರು. (ಏಜೆನ್ಸೀಸ್)