ನ್ಯೂಸ್

ಕೈ ಗೆಲುವಿಗೆ ಟಾರ್ಗೆಟ್ 3: ಜಿಲ್ಲೆಯಲ್ಲಿ 3 ಕ್ಷೇತ್ರ ಗೆಲ್ಲಲು ಡಿ.ಕೆ. ಶಿವಕುಮಾರ್ ಗುರಿ

Ramanagara

ರಾಮನಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗುವ ಕನಸು ಹೊತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಿಲ್ಲೆಯಲ್ಲಿ ಪಕ್ಷದ ಗೆಲುವಿಗೆ ‘ಟಾರ್ಗೆಟ್ 3’ ಯೋಜನೆ ರೂಪಿಸಿದ್ದಾರೆ.

ಸಹೋದರ ಡಿ.ಕೆ. ಸುರೇಶ್ ಮೂಲಕ ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತ ಪಡಿಸಿವೆ.

ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಕನಕಪುರ ಹೊರತುಪಡಿಸಿ ಮಾಗಡಿ, ರಾಮನಗರ ಮತ್ತು ಚನ್ನಪಟ್ಟಣ ಕಾಂಗ್ರೆಸ್ ತೆಕ್ಕೆಯಲ್ಲಿ ಇಲ್ಲ. ಆದರೆ ಮುಂಬರುವ ಚುನಾವಣೆಯಲ್ಲಿ ಮಾಗಡಿ ಮತ್ತು ರಾಮನಗರ ಕ್ಷೇತ್ರಗಳನ್ನು ಕೈ ವಶ ಮಾಡಿಕೊಳ್ಳಬೇಕು ಎನ್ನುವ ಯೋಜನೆ ಸಿದ್ಧಪಡಿಸಿಕೊಂಡಿದ್ದು, ಕೋವಿಡ್ ಸಂದರ್ಭದಲ್ಲಿ ಫುಡ್ ಕಿಟ್ ವಿತರಣೆ, ಸಹಾಯಹಸ್ತ ಯೋಜನೆಗಳ ಮೂಲಕ ಮತದಾರರ ಮನೆ ಮತ್ತು ಮನ ತಲುಪುವ ಕಾರ್ಯಕ್ಕೆ ಇಳಿದಿದ್ದಾರೆ. ಆದರೆ, ಚನ್ನಪಟ್ಟಣದಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಲ ಇಲ್ಲ ಎನ್ನುವುದನ್ನು ಅರಿತು ಅತ್ತ ಕಡೆ ಹೆಚ್ಚಿನ ಗಮನಹರಿಸುತ್ತಿಲ್ಲ. ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಗೆಲುವು ನಿಶ್ಚಿತ, ಇದರ ಜತೆಗೆ ಮಾಗಡಿಯಲ್ಲಿ ಮತ್ತು ರಾಮನಗರದಲ್ಲಿ ಗೆಲುವು ಸಾಧಿಸಲೇಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ರಂಗೇರಲಿದೆ ಅಖಾಡ: ಮುಂಬರುವ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ

ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತ. ಆದರೆ ಇವರ ಎದುರು ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಡಿ.ಕೆ.ಸುರೇಶ್ ಸ್ಪರ್ಧೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಕೈಗೊಂಡಿರುವ ನಿರ್ಧಾರ ಚುನಾವಣೆವರೆಗೂ ಮುಂದುವರಿದರೆ ರಾಮನಗರ ಚುನಾವಣೆ ಅಖಾಡ ರಂಗೇರುವುದು ಖಚಿತ.

ಜಿಪಂಗೂ ಡಿಕೆಸು ಉಸ್ತುವಾರಿ: ಇದರ ನಡುವೆ ಮುಂಬರುವ ಜಿಪಂ, ತಾಪಂ ಚುನಾವಣೆ ಸಹ ಸಂಸದ ಡಿ.ಕೆ.ಸುರೇಶ್ ಉಸ್ತುವಾರಿಯಲ್ಲಿ ನಡೆಯುತ್ತಿದೆ. ನಾಲ್ಕೂ ತಾಪಂ, ಜಿಪಂಗಳಲ್ಲಿ ಅಧಿಕಾರ ಹಿಡಿಯಲೇಬೇಕು ಎನ್ನುವ ಕಾರಣಕ್ಕೆ ಅಭ್ಯರ್ಥಿಗಳ ಆಯ್ಕೆ, ಅವರಿಗೆ ಬೇಕಾದ ಸಂಪನ್ಮೂಲ ಕ್ರೋಡೀಕರಿಸುವ ಜವಾಬ್ದಾರಿಯನ್ನು ಡಿ.ಕೆ.ಸುರೇಶ್ ಹೊತ್ತಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ರಾಮನಗರದಿಂದ ಕಣಕ್ಕೆ? : ಈ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ಕನಕಪುರ ಬಿಟ್ಟು ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ಆದರೆ ಸ್ವತಃ ಡಿ.ಕೆ.ಶಿವಕುಮಾರ್ ಕ್ಷೇತ್ರ ಬದಲಾವಣೆ ನಿರಾಕರಿಸಿದ್ದರು. ಆದರೆ ಇದೀಗ ಲಭ್ಯ ಮಾಹಿತಿ ಪ್ರಕಾರ ಸಂಸದ ಡಿ.ಕೆ.ಸುರೇಶ್ ಅವರು ರಾಮನಗರದಿಂದ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಆಪ್ತರ ಮೂಲಕ ಸಿದ್ಧತೆ ಮಾಡುತ್ತಿದ್ದಾರೆ.

ಡಿಕೆಸು ರಾಜ್ಯಕ್ಕೆ ಎಂಟ್ರಿ? :ಡಿ.ಕೆ. ಶಿವಕುಮಾರ್ ರಾಜಕೀಯದಲ್ಲಿ ಉತ್ತುಂಗಕ್ಕೆ ಏರಬೇಕಾದರೆ ಸಂಸದ ಡಿ.ಕೆ.ಸುರೇಶ್ ಪಾತ್ರ ಹಿರಿದು. ಇದೀಗ ಅಣ್ಣನನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ಕನಸು ಹೊತ್ತಿರುವ ಸುರೇಶ್ ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳನ್ನು ಗೆಲ್ಲುವ ಉಸ್ತುವಾರಿ ಜತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಖುದ್ದು ಡಿ.ಕೆ. ಸುರೇಶ್ ಸಹ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಪಡೆಯಲಿದ್ದಾರೆ.