ನ್ಯೂಸ್

ಜು.5ರಂದು ಹಿರಿಯ ವೈದ್ಯ ಡಾ. ನಾರಾಯಣ ಅವರಿಗೆ ಅಭಿನಂದನೆ

ಶಿವಮೊಗ್ಗ: ನಗರದ ಡಾ. ಪಿ.ನಾರಾಯಣ ಅಭಿನಂದನಾ ಸಮಿತಿಯಿಂದ ಹಿರಿಯ ವೈದ್ಯ, ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ ಅವರಿಗೆ ನಾಗರಿಕ ಅಭಿನಂದನಾ ಸಮಾರಂಭವನ್ನು ಜು.5ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಇಎಸ್ ಅಧ್ಯಕ್ಷ ಜಿ.ನಾರಾಯಣ ರಾವ್ ಹೇಳಿದರು.

ಬೆಳಗ್ಗೆ 10ಕ್ಕೆ ವೈದ್ಯ ನಮನ ಚಿಂತನ-ಮಂಥನ ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಉದ್ಘಾಟಿಸುವರು. ಶೃಂಗೇರಿ ಶಂಕರಮಠದ ಮಾಜಿ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಭಾಗವಹಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11ಗಂಟೆಗೆ ಧಾರ್ಮಿಕ ಚಿಂತನ ಗೋಷ್ಠಿಯಲ್ಲಿ ಮತ್ತೂರಿನ ಶ್ರೀ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ, ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಎಂ.ಎನ್.ನಂದಕುಮಾರ್, ಹಾಲಾಡಿಯ ಜ್ಯೋತಿಷಿ ವಾಸುದೇವ ಜೋಯಿಸ್ ಭಾಗವಹಿಸುವರು. ವಿಶ್ರಾಂತ ಉಪನ್ಯಾಸಕ ಎ.ಎಸ್.ಕೃಷ್ಣಮೂರ್ತಿ ಸಮನ್ವಯಗೊಳಿಸುವರು ಎಂದರು.

ಮಧ್ಯಾಹ್ನ 12ಕ್ಕೆ ಶೈಕ್ಷಣಿಕ ಚಿಂತನ ಗೋಷ್ಠಿಯಲ್ಲಿ ಬೆಂಗಳೂರು ಭಾರತೀಯ ವಿಜ್ಞಾನ ಕೇಂದ್ರದ ಪ್ರಾಚಾರ್ಯ ಪ್ರೊ. ಸುಬ್ಬಾರೆಡ್ಡಿ, ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಬೆಂಗಳೂರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಎಲ್.ಎಸ್.ಶಶಿಧರ್ ವಿಷಯ ಮಂಡಿಸುವರು. ಪರಿಸರ ತಜ್ಞ ಡಾ. ಎಲ್.ಕೆ.ಶ್ರೀಪತಿ ಸಮನ್ವಯಗೊಳಿಸುವರು. ಮಧ್ಯಾಹ್ನ 2ಕ್ಕೆ ಆರೋಗ್ಯ ಚಿಂತನ ಕಾರ್ಯಕ್ರಮದಲ್ಲಿ ಡಾ. ವಿನಯಾ ಶ್ರೀನಿವಾಸ್, ಅರಿವಳಿಕೆ ತಜ್ಞ ರವಿಶಂಕರ ರಾವ್ ಬೈಕಾಡಿ, ತಜ್ಞ ಸಲಹಾ ವೈದ್ಯ ಶ್ರೀಕಾಂತ್ ಹೆಗಡೆ ಪಾಲ್ಗೊಳ್ಳುವರು. ಡಾ. ರತ್ನಾಕರ್ ಸಮನ್ವಯಗೊಳಿಸುವರು ಎಂದು ಹೇಳಿದರು.

ಸೇವಾ ಚಿಂತನ ಕಾರ್ಯಕ್ರಮದಲ್ಲಿ ಕುಂದಾಪುರದ ವಕೀಲ ಎ.ಎಸ್.ಎನ್.ಹೆಬ್ಬಾರ್, ಬೆಂಗಳೂರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಮಕ್ಕಳ ತಜ್ಞ ವೈದ್ಯ ಕೃಷ್ಣ ಸಿ. ಮೂರ್ತಿ, ಕೈಗಾರಿಕೋದ್ಯಮಿ ಡಾ. ವಸಂತ ಪ್ರಭು ಭಾಗವಹಿಸುವರು. ಹಿರಿಯ ಪತ್ರಕರ್ತ ಎಚ್.ಯು.ವೈದ್ಯನಾಥ್ ಸಮನ್ವಯಗೊಳಿಸುವರು. ನಂತರ ನಗರದ ಖ್ಯಾತ ಗಾಯಕಿ ಸುರೇಖಾ ಹೆಗಡೆ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಾಡಿನ ಅತ್ಯಂತ ಕಿರಿಯ ಹಾಗೂ ಕೇರಳದ ಮೊಟ್ಟ ಮೊದಲ, ಏಕೈಕ ವಯೋಲಿನ್ ವಾದಕಿ ಗಂಗಾ ಸಸಿಧರನ್ ಮತ್ತು ತಂಡದವರಿಂದ ವಯೋಲಿನ್ ವಾದನ ನಡೆಯಲಿದೆ ಎಂದರು.ಎಂದರು.

ಪ್ರಮುಖರಾದ ಡಾ. ಎಂ.ಎನ್.ನಂದಕುಮಾರ್, ಕಾರ್ಯದರ್ಶಿ ಡಾ. ಎಚ್.ಎಸ್.ನಾಗಭೂಷಣ, ಎ.ಎಸ್.ಕೃಷ್ಣಮೂರ್ತಿ, ಪದ್ಮನಾಭ, ಗೋಪಾಲ್, ಲಕ್ಷ್ಮೀ, ಸುನೀತಾ ಶ್ರೀಧರ್, ಶ್ರೀಧರ್ ಸುದ್ದಿಗೋಷ್ಠಿಯಲ್ಲಿದ್ದರು.

ಅಭಿನಂದನಾ ಗ್ರಂಥ ಬಿಡುಗಡೆ

ಜು.5ರಂದು ಸಂಜೆ 6ಕ್ಕೆ ಜನವೈದ್ಯ ನಮನ ನಾಗರಿಕ ಅಭಿನಂದನಾ ಗ್ರಂಥವನ್ನು ಹೃದ್ರೋಗ ತಜ್ಞ, ಸಂಸದ ಡಾ. ಸಿ.ಎನ್.ಮಂಜುನಾಥ್ ಬಿಡುಗಡೆಗೊಳಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಡಾ. ಪಿ.ನಾರಾಯಣ ಕುರಿತ ಅಭಿನಂದನಾ ಗ್ರಂಥ ಯೋಜಕ ಕೃತಿಯ ಮುಖಪುಟ ಬಿಡುಗಡೆಯಾಗಲಿದೆ ಎಂದು ಜಿ.ನಾರಾಯಣರಾವ್ ಹೇಳಿದರು.