ಶಿವಮೊಗ್ಗ: ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜು.31ರ ಸಂಜೆ 5ಕ್ಕೆ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.
ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಉಪಸ್ಥಿತರಿರುವರು. ಸಹ್ಯಾದ್ರಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಎನ್.ವಿಶ್ವನಾಥಯ್ಯ ಉಪನ್ಯಾಸ ನೀಡುವರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ಗೌರವ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ನಮ್ಮ ಸಂಘವು ಸಮಾಜದ ಮಕ್ಕಳಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಈ ಬಾರಿಯೂ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ಕ್ಕೂ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು.
220ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರು ಪಡೆದ ಅಂಕಗಳ ಆಧಾರದ ಮೇಲೆ ಕ್ರಮವಾಗಿ 5ರಿಂದ 8 ಸಾವಿರ ರೂ.ವರೆಗೆ ನಗದು ಬಹುಮಾನ ನೀಡಲಾಗುವುದು. ಇದಕ್ಕಾಗಿ 15 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.
ಕೋಶಾಧ್ಯಕ್ಷ ಕೆ.ಎಸ್.ತಾರಾನಾಥ್ ಮಾತನಾಡಿ, ಮುಂದಿನ ದಿನಗಳಲ್ಲಿ ಗಾಡಿಕೊಪ್ಪದಲ್ಲಿ ವಸತಿ ಶಾಲೆ ತೆರೆಯುವ ಉದ್ದೇಶವಿದೆ. ಆ.3ರಂದು ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದರು. ಪ್ರಮುಖರಾದ ಅನಿತಾ ರವಿಶಂಕರ್, ಬಳ್ಳೇಕೆರೆ ಸಂತೋಷ್, ಸಿ.ರೇಣುಕಾರಾಧ್ಯ, ಎಂ.ಮೋಹನ್‌ಕುಮಾರ್, ಸಿ.ಮಹೇಶಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.